ಬೆಂಗಳೂರು : ಸಿದ್ದರಾಮಯ್ಯ ಮಾತನಾಡಿದ ವಿಡಿಯೋವನ್ನ ಯಾರು ಮಾಡಿದರು ಅನ್ನೋದು ಬಹಳ ಮುಖ್ಯ. ಕುಳಿತು ಮಾತಾಡಿದ್ದನ್ನು ವಿಡಿಯೋ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಸಿದ್ದರಾಮಯ್ಯ ನಮ್ಮ ಪಕ್ಷದ ಪ್ರಭಾವಿ ಮುಖಂಡ. ಹಾಗೆಯೇ ಡಿ.ಕೆ. ಶಿವಕುಮಾರ ಕೂಡ ನಮ್ಮ ಪಕ್ಷದ ಮುಖಂಡರು. ಕಾಂಗ್ರೆಸ್ ನಾಯಕರನ್ನ ಒಗ್ಗೂಡದಂತೆ ಮಾಡುವುದಕ್ಕಾಗಿ ಇಂತಹ ಕೆಲಸಗಳು ನಡೆಯುತ್ತಿರುತ್ತೆ. ಆಂತರಿಕ ಚರ್ಚೆಗಳು ಆಂತರಿಕವಾಗಿಯೇ ಇರಬೇಕು. ಅದು ರಾಜಕೀಯ ಲೆಕ್ಕಾಚಾರಗಳು. ಮಾಧ್ಯಮಗಳಲ್ಲಿ ಜಾತಿ ಲೆಕ್ಕಾಚಾರಗಳ ಬಗ್ಗೆ ಚರ್ಚೆ ಆಗಲ್ವಾ ? ಹಾಗೆಯೇ ರಾಜಕಾರಣದಲ್ಲಿ ಜಾತಿಯ ಲೆಕ್ಕಾಚಾರ ಇರುತ್ತೆ. ಆ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದರು.
ಕುಮಾರಸ್ವಾಮಿ ಹೇಳಿಕೆಗೆ ಬಗ್ಗೆ ನಾನು ಕಮೆಂಟ್ ಮಾಡಲಿಕ್ಕೆ ಹೋಗಲ್ಲ. ಒಂದೊಂದು ಬಾರಿ ಒಂದೊಂದು ರೀತಿ ಮಾತನಾಡುತ್ತಾರೆ. ಆದರೆ ಸರ್ಕಾರ ಜನಪರ ಕೆಲಸ ಮಾಡುತ್ತಿದೆಯಾ ಅನ್ನೋದಷ್ಟೇ ಮುಖ್ಯ. ಹಿಂದೆ ಕಾಂಗ್ರೆಸ್ ಸರ್ಕಾರ ಮಾಡಿದ ಕೆಲಸಗಳನ್ನ ಜನತೆ ನೆನೆಯುತ್ತಿದ್ದಾರೆ. ಎಲ್ಲ ನಾಯಕರು ಒಗ್ಗಟ್ಟಾಗಿ ಹೋಗೋದಕ್ಕೆ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.
ಇದಾದ ಬಳಿಕ ಕಾಂಗ್ರೆಸ್ ರಾಜ್ಯಸಭಾ ಸದಸ್ಯರ ಸಭೆಯಲ್ಲಿ ಪಾಲ್ಗೊಂಡರು. ಸಭೆಯಲ್ಲಿ ಜಿಸಿ ಚಂದ್ರಶೇಖರ್, ಬಿ.ಕೆ ಹರಿಪ್ರಸಾದ್, ನಾಸೀರ್ ಹುಸೇನ್ ಸೇರಿದಂತೆ ರಾಜ್ಯ ಸಭಾಸದಸ್ಯರು ಭಾಗಿಯಾಗಿದ್ದರು. ಉಪಚುನಾವಣೆ, ಪಕ್ಷ ಸಂಘಟನೆ, ನೆರೆ ಭಾಗದಲ್ಲಿ ಪಕ್ಷದಿಂದ ಪಾದಯಾತ್ರೆ ಮಾಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.