ಬೆಂಗಳೂರು: ಬೆಳಗ್ಗಿನಿಂದಲೂ ನಿರಂತರ ಓಡಾಟದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿವಿಧ ಗಣ್ಯರನ್ನು ಭೇಟಿ ಮಾಡಿ ಸಮಾಲೋಚಿಸಿದ್ದರು.
ಬೆಳಗ್ಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕೋವಿಡ್ ಕಾಂಗ್ರೆಸ್ ಕಾರ್ಯಪಡೆ ಸಭೆ ನಡೆಸಿದರು. ಇದಾದ ಬಳಿಕ ಸದಾಶಿವನಗರ ನಿವಾಸಕ್ಕೆ ತೆರಳಿ ಕೆಲ ಹೊತ್ತು ಕಾಲ ಕಳೆದು, ಅಲ್ಲಿಂದ ಸಂಜೆ 4ಕ್ಕೆ ಬೆಂಗಳೂರಿನ ಆರ್ಚ್ ಬಿಷಪ್ ರೆವರೆಂಡ್ ಪೀಟರ್ ಮಕಾಡೋ ಅವರನ್ನು ಜಯಮಹಲ್ ಬಡಾವಣೆಯ ಮಿಲ್ಲರ್ ರಸ್ತೆಯಲ್ಲಿನ ಆರ್ಚ್ ಬಿಷಪ್ ಅವರ ನಿವಾಸದಲ್ಲಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಜೆ ಜಾರ್ಜ್ ಉಪಸ್ಥಿತರಿದ್ದರು.
ಸಂಜೆ ಚಿತ್ರನಟ ಶಿವರಾಜ್ ಕುಮಾರ್ ಅವರ ಮಾನ್ಯತಾ ಟೆಕ್ ಪಾರ್ಕ್ ನಿವಾಸಕ್ಕೆ ಡಿಕೆಶಿ ಭೇಟಿ ಕೊಟ್ಟರು. ಸಂಜೆಯ ಈ ಸೌಜನ್ಯದ ಭೇಟಿ ಸಂದರ್ಭದಲ್ಲಿ ಸಾಕಷ್ಟು ವಿಚಾರಗಳ ಕುರಿತು ಸಮಾಲೋಚನೆ ನಡೆಸಿದರು. ಇದೇ ಸಂದರ್ಭದಲ್ಲಿ ಗೀತಾ ಶಿವರಾಜ್ ಕುಮಾರ್ ಉಪಸ್ಥಿತರಿದ್ದರು.
ಒಟ್ಟಾರೆ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕೃತ ಪದಗ್ರಹಣ ನೆರವೇರಿದ ನಂತರ ಇನ್ನಷ್ಟು ಜವಾಬ್ಧಾರಿ ವಹಿಸಿಕೊಂಡಿರುವ ಡಿಕೆಶಿ ರಾಜ್ಯದ ಅಭಿವೃದ್ಧಿ, ಸರ್ಕಾರದ ಆಡಳಿತ ಕುರಿತು ವಿವಿಧ ಸಮುದಾಯದ ಮುಖಂಡರು, ನಾಯಕರನ್ನು ಭೇಟಿ ಮಾಡಿ ಚರ್ಚಿಸುತ್ತಿದ್ದಾರೆ. ಪುತ್ರಿಯ ವಿವಾಹ ನಿಶ್ಚಿತಾರ್ಥ ದಿನಾಂಕ ಕೂಡ ಸಮೀಪಿಸುತ್ತಿದ್ದು, ಈ ಎಲ್ಲ ವಿಚಾರವಾಗಿ ಚರ್ಚೆ ನಡೆಸುವ ಕಾರ್ಯ ಮಾಡುತ್ತಿದ್ದಾರೆ.