ಬೆಂಗಳೂರು: ಇಡೀ ಭೂಲೋಕದಲ್ಲಿ ಇರುವುದನ್ನೆಲ್ಲ ತಿಳಿದುಕೊಳ್ಳುತ್ತಾರೆ. ಅವರಿಗೆ ಗೊತ್ತಿಲ್ಲದಿರುವುದು ಯಾವುದೂ ಇಲ್ಲ. ರಾಜ್ಯಕ್ಕೆ, ರಾಷ್ಟ್ರಕ್ಕೆ ಗೊತ್ತಿಲ್ಲದ ಫೋನ್ ಕದ್ದಾಲಿಕೆ ಅವರಿಗೆ ಗೊತ್ತಿದೆ ಎನ್ನುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ ತಿರುಗೇಟು ನೀಡಿದ್ದಾರೆ.
ವೈಯಾಲಿಕಾವಲ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರು ಶಾಸಕರು ಸೇರಿ ಇಡೀ ಬಿಜೆಪಿ ನನಗೆ ಹಾಗೂ ಪಕ್ಷಕ್ಕಾಗಿ ಬಹಳ ಶ್ರಮಪಟ್ಟಿದೆ. ಬಹಳಷ್ಟು ಶ್ರಮ ಹಾಕಿ ಪ್ರಚಾರ ನಡೆಸಿದೆ. ಮೊದಲು ನಾನು ಏಕಾಂಗಿ ಹೋರಾಟ ಮಾಡುತ್ತಿದ್ದೆ. ಈಗ ಇಷ್ಟು ದೊಡ್ಡ ಕುಟುಂಬ ಸಿಕ್ಕಿದೆ. ಇದಕ್ಕಾಗಿ ಪಕ್ಷದ ಎಲ್ಲರಿಗೂ ಕೃತಜ್ಞತೆ ಅರ್ಪಿಸುತ್ತೇನೆ ಎಂದರು. ಸ್ವಲ್ಪ ಮೈಮರೆತರೂ ಈ ಕ್ಷೇತ್ರ ಕೆ.ಜಿ ಹಳ್ಳಿ ಡಿ.ಜೆ. ಹಳ್ಳಿ ಆಗಲಿದೆ ಎಂದು ನಾನು ಮೊದಲೇ ಹೇಳಿದ್ದೆ. ನಿನ್ನೆ ರಾತ್ರಿ ಲಗ್ಗೆರೆಯಲ್ಲಿ ಕೊಲೆ ಆಗಬೇಕಾಗಿತ್ತು. ಆದರೆ ಪೊಲೀಸರ ಮುನ್ನೆಚ್ಚರಿಕೆಯಿಂದ ಲಗ್ಗೆರೆಯಲ್ಲಿ ಅದು ತಪ್ಪಿದೆ. ನೀವು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುವವರು ಹಣ ಹಂಚುವ ಕೆಲಸವನ್ನು ಏಕೆ ಮಾಡುತ್ತಿದ್ದೀರಿ? ಕನಕಪುರದಿಂದ ನಿನ್ನೆ ನಿಮ್ಮ ಬೆಂಬಲಿಗರು ಬಂದು ಎಲ್ಲಾ ಕಡೆ ಹಣ ಹಂಚಿಕೆ ಮಾಡಿದ್ದಾರೆ. ಏಳು ಕಡೆ ಸಿಕ್ಕಿಬಿದ್ದಿದ್ದಾರೆ. ದೌರ್ಜನ್ಯದ ರಾಜಕಾರಣ ಮಾಡುತ್ತಿದ್ದಾರೆ. ಕನಕಪುರದಿಂದ ಜನ ಬರುತ್ತಾರೆ ಎಂದು ಗೊತ್ತು. ಆದರೆ ಬೆಂಗಳೂರನ್ನು ಯಾಕೆ ಹಾಳು ಮಾಡುತ್ತಿದ್ದೀರಿ? ಬೆಂಗಳೂರನ್ನು ಶಾಂತಿಯುತವಾಗಿ ಇರಲು ಬಿಡಿ, ನಾನು ಮಿಲಿಟರಿ ಕೇಳಿದ್ದು ಇದೇ ಉದ್ದೇಶಕ್ಕಾಗಿ ಎಂದು ಸ್ಪಷ್ಟಪಡಿಸಿದರು.
1990ರಲ್ಲಿ ಇದೇ ರೀತಿ ಮಾಡಿದ್ದರು ಎಂದು ನಿನ್ನೆ ಕುಮಾರಸ್ವಾಮಿ ಸರಿಯಾಗಿ ಹೇಳಿದ್ದಾರೆ. ಅದೇ ರೀತಿ ಈಗ ಮತ್ತೆ ಆಗಬಾರದು. ಕ್ಷೇತ್ರ ಶಾಂತವಾಗಿದೆ. ಶಾಂತಿಯುತ ಮತದಾನಕ್ಕೆ ಸಂಪೂರ್ಣವಾಗಿ ನಮ್ಮ ಚುನಾವಣಾಧಿಕಾರಿಗಳು ಹಾಗೂ ಇತರ ಎಲ್ಲರೂ ಚೆನ್ನಾಗಿಯೇ ವ್ಯವಸ್ಥೆ ಮಾಡಿದ್ದಾರೆ. ಕಾನೂನು-ಸುವ್ಯವಸ್ಥೆ ಕಟ್ಟುನಿಟ್ಟಾಗಿದೆ. ಮತದಾರರು ನಿಮ್ಮ ನಿಮ್ಮ ವಾರ್ಡ್ಗಳಲ್ಲಿ ಬಂದು ಮತ ಚಲಾವಣೆ ಮಾಡಿ. ನಿಮಗೆ ಕೆಲಸ ಮಾಡುವ ಪಕ್ಷ ಆಡಳಿತದಲ್ಲಿರುವ ಪಕ್ಷಕ್ಕೆ ಅವಕಾಶ ನೀಡಿ. ಮುನಿರತ್ನ ಆಯ್ಕೆ ಮಾಡಿಕೊಂಡರೆ ಎರಡುವರೆ ವರ್ಷ ಅಧಿಕಾರ ಇರುವ ಪಕ್ಷಕ್ಕೆ ಅವಕಾಶ ಕೊಟ್ಟಂತೆ ಆಗಲಿದೆ. ಅಭಿವೃದ್ಧಿ ಕೆಲಸ ಆಗಲಿದೆ. ಈಗಾಗಲೇ ಎರಡು ವರ್ಷ ಕಳೆದುಕೊಂಡಿದ್ದೀರಿ ಮತ್ತೆ ಹಿಂದೆ ಹೋಗುವುದು ಬೇಡ. ನಾನು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತೇನೆ. ಬೇರೆ ಆಲೋಚನೆ ಏನೂ ಇಲ್ಲ ಎಂದ ಅವರು ತಮಗೆ ಮತ ನೀಡುವಂತೆ ಮನವಿ ಮಾಡಿದರು.
ಹಣ ಹಂಚಿಕೆ ಸಂಬಂಧ ಈಗಾಗಲೇ 7 ಎಫ್ಐಆರ್ ದಾಖಲಾಗಿದೆ. ಹಣ ಹಂಚಿಕೆ ಸಂಬಂಧ ಎಲ್ಲಾ ಕಡೆ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಕೆಲವರು ವಾಹನಗಳನ್ನು ಬಿಟ್ಟು ಹೋಗಿದ್ದಾರೆ ಎಲ್ಲವೂ ತನಿಖೆಯಾಗಲಿ ಎಂದು ಒತ್ತಾಯಿಸಿದರು.
ಇಡೀ ಪ್ರಪಂಚಕ್ಕೆ ಯಾರು ಭ್ರಷ್ಟರು, ಯಾರು ಒಳ್ಳೆಯವರು, ಯಾರು ಏನು ಎಂದು ಗೊತ್ತಿದೆ. ಮುನಿರತ್ನ 18ನೇ ವಯಸ್ಸಿಗೆ ಗುತ್ತಿಗೆದಾರರಾಗಿ ಬಂದಿದ್ದಾನೆ. 18 ವರ್ಷದಿಂದ ಆದಾಯ ತೆರಿಗೆ ಕಟ್ಟುತ್ತಿದ್ದಾನೆ. ಮುನಿರತ್ನ ಭ್ರಷ್ಟ ಅಲ್ಲ, ಶಾಸಕನಾಗಿ 10 ವರ್ಷ ಇದ್ದೇನೆ. ಗುತ್ತಿಗೆದಾರರಾಗಿ 25ವರ್ಷ ಇದ್ದೆ. ಭ್ರಷ್ಟ ಎಂದು ಗೊತ್ತಿದ್ದರೆ, ನನ್ನನ್ನು ಜೊತೆಯಲ್ಲಿ ಇಟ್ಟುಕೊಂಡಿದ್ದೇಕೆ?ಆ ವತ್ತೇ ಪಕ್ಷದಿಂದ ಹೊರ ಹಾಕಬಹುದಿತ್ತು. ಆಗ ಗೊತ್ತಿರಲಿಲ್ಲ ಈಗ ಗೊತ್ತಾಯಿತು ಎನ್ನುತ್ತಾರಲ್ಲ. ಅವರು ಇಡೀ ಭೂಲೋಕದಲ್ಲಿ ಇರುವುದನ್ನೆಲ್ಲ ತಿಳಿದುಕೊಳ್ಳುತ್ತಾರೆ. ಅವರಿಗೆ ಗೊತ್ತಿಲ್ಲದಿರುವುದು ಯಾವುದೂ ಇಲ್ಲ. ರಾಜ್ಯಕ್ಕೆ ರಾಷ್ಟ್ರಕ್ಕೆ ಗೊತ್ತಿಲ್ಲದ ಫೋನ್ ಕದ್ದಾಲಿಕೆ ಕೂಡ ಅವರಿಗೆ ಗೊತ್ತಿದೆ. ಬರೀ ಇದೊಂದೇ ಅಲ್ಲ, ಬಹಳಷ್ಟಿದೆ ಎಂದು ಡಿ ಕೆ ಸಹೋದರರಿಗೆ ಮುನಿರತ್ನ ಟಾಂಗ್ ನೀಡಿದರು.