ಬೆಂಗಳೂರು : ರಾಜ್ಯದಲ್ಲಿ ಉಗ್ರರ ದಾಳಿಯ ಬಗ್ಗೆ ಗುಪ್ತಚರ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆ, ಎಲ್ಲ ಜಿಲ್ಲೆಗಳ ಐಜಿಪಿ , ಎಸ್ಪಿ, ನಗರ ವ್ಯಾಪ್ತಿಯ ಹಿರಿಯ ಅಧಿಕಾರಿಗಳು ಹಾಗೂ ಗುಪ್ತಚರ ಇಲಾಖೆ ಅಧಿಕಾರಿಗಳೊಂದಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ವಿಡಿಯೋ ಸಂವಾದ ನಡೆಸಿದರು.
ಕೊರೊನಾ ಲಾಕ್ಡೌನ್ ಹಿನ್ನೆಲೆ ಬಹಳಷ್ಟು ಜನ ವಲಸೆ ಹೊರಟ್ಟಿದ್ದಾರೆ. ಈ ಸಂದರ್ಭವನ್ನು ಬಳಸಿಕೊಂಡಿರುವ ಭಯೋತ್ಪಾದಕರು ವಲಸಿಗರ ರೂಪದಲ್ಲಿ ರಾಜ್ಯ ಪ್ರವೇಶಿಸಿ, ವಿಧ್ವಂಸಕ ಕೃತ್ಯವೆಸಗುವ ಸಾಧ್ಯತೆಯಿದೆ. ಆದ್ದರಿಂದ ಹೊರ ರಾಜ್ಯಗಳಿಂದ ಬಂದವರು ಹಾಗೂ ಇಲ್ಲೆ ನೆಲೆಸಿರುವ ಸಂಶಯಾಸ್ಪದ ವ್ಯಕ್ತಿಗಳ ಮೇಲೆ ತೀವ್ರ ನಿಗಾ ಇಟ್ಟು ಅಗತ್ಯವಿದ್ದರೆ ಬಂಧಿಸಿ ವಿಚಾರಣೆ ನಡೆಸುವಂತೆ ಪ್ರವೀಣ್ ಸೂದ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
ಎಟಿಎಸ್ ಹಾಗೂ ಎನ್ಐಎಗೆ ಹೆಚ್ಚಿನ ಜವಾಬ್ದಾರಿ:
ಭಯೋತ್ಪಾದಕ ಚಟುವಟಿಕೆಗಳನ್ನು ಮಟ್ಟ ಹಾಕಲು ಇರುವ ಎಟಿಎಸ್ (ಭಯೋತ್ಪಾದಕ ನಿಗ್ರಹ ದಳ ) ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ಎರಡು ಸದ್ಯ ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿದ್ದು, ವಿಶ್ವಸಂಸ್ಥೆ ವರದಿ ಆಧಾರದ ಮೇರೆಗೆ ಕರ್ನಾಟಕ ಮತ್ತು ಕೇರಳದ ಐಸಿಸ್ ಸದಸ್ಯರ ಮೇಲೆ ಕಣ್ಣಿಟ್ಟಿದ್ದಾರೆ. ಜೊತೆಗೆ ಈ ಎರಡೂ ತಂಡ ತಮಿಳುನಾಡು ಪೊಲೀಸರ ಸಹಕಾರವನ್ನೂ ಪಡೆದು ಗೌಪ್ಯತೆಯಿಂದ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಕೆಲ ಐಸಿಸ್ ಸದಸ್ಯರು ಎನ್‌ಐಎ ವಶದಲ್ಲಿದ್ದು, ಅವರ ಮೂಲಕ ಉಗ್ರರ ಚಟುವಟಿಕೆಯ ಮಾಹಿತಿ ಕಲೆ ಹಾಕುತ್ತಿದ್ದಾರೆ. ಎಟಿಎಸ್ ಹಾಗೂ ಎನ್‌ಐಎ ಪ್ರಮುಖವಾದ ತನಿಖೆ ನಡೆಸುತ್ತಿರುವ ಹಿನ್ನೆಲೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಕೂಡ ತಮ್ಮ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿ ತನಿಖಾ ತಂಡಕ್ಕೆ ಸಹಾಯ ಮಾಡಲಿದ್ದಾರೆ.