ಬೆಂಗಳೂರು: ಖರ್ಚಿಗೆ 100 ರೂ. ಹಣ ಕೊಡುವಂತೆ ಪೀಡಿಸುತ್ತಿದ್ದ ಎಂಬ ಕಾರಣಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿದ್ದ ಆರೋಪಿಯನ್ನು ಡಿ.ಜೆ ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಡಿ.ಜೆ ಹಳ್ಳಿಯ ಶಬ್ಬೀರ್ (22) ಬಂಧಿತ ಆರೋಪಿ. ಪಾಲೀಶ್ ಕೆಲಸ ಮಾಡುತ್ತಿದ್ದ ಶಬ್ಬೀರ್, ಬುಧವಾರ ಮಧ್ಯಾಹ್ನ 12:30ರ ಸುಮಾರಿಗೆ ಮೋದಿ ರಸ್ತೆಯಲ್ಲಿ ಮೊಹಮ್ಮದ್ ವಾಸೀಂ ಎಂಬಾತನಿಗೆ ಚೂರಿಯಿಂದ ಇರಿದು ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ವಾಸೀಂ ಮತ್ತು ಶಬ್ಬಿರ್ ಪರಿಚಿತರು. ಶಬ್ಬಿರ್ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ವಾಸೀಂ ಪರಿಚಯವಾಗಿದ್ದು ಸ್ನೇಹಿತರಾಗಿದ್ದರು. ತನ್ನ ಖರ್ಚಿಗೆ 50 ಅಥವಾ 100 ರೂ. ಕೊಡುವಂತೆ ಶಬ್ಬೀರ್‌ಗೆ ವಾಸೀಂ ಪೀಡಿಸುತ್ತಿದ್ದ. ಮಂಗಳವಾರ ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿತ್ತು. ಹಣ ಕೊಟ್ಟಿಲ್ಲ ಎಂದು ಶಬ್ಬೀರ್‌ಗೆ ವಾಸೀಂ ತನ್ನ ಬಳಿಯಿದ್ದ ಚೂರಿಯಿಂದ ಇರಿಯಲು ಮುಂದಾಗಿದ್ದಾನೆ. ಈ ವೇಳೆ ,ಅದೇ ಚೂರಿಯನ್ನು ಕಿತ್ತುಕೊಂಡು ವಾಸೀಂಗೆ ಇರಿದು ಶಬ್ಬೀರ್ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.