ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆ ಮಾದರಿಯಲ್ಲೇ ನಗರದ ಎಲ್ಲಾ ಹೊರ ವರ್ತುಲ (ರಿಂಗ್ ರೋಡ್) ರಸ್ತೆಗಳನ್ನು ಅಭಿವೃದ್ಧಿಪಡಿಸಲು ಈ ಬಾರಿಯ ಬಿಬಿಎಂಪಿ ಬಜೆಟ್ನಲ್ಲಿ ವಿಶೇಷ ಅನುದಾನ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.
ಈಟಿವಿ ಭಾರತನೊಂದಿಗೆ ಮಾತನಾಡಿದ ಅವರು, ಉದ್ಯಾನನಗರಿ ಖ್ಯಾತಿಯ ಬೆಂಗಳೂರು ಹಸಿರೀಕರಣದಿಂದ ಕಂಗೊಳಿಸಬೇಕು. ನಗರಕ್ಕೆ ಬರುವ ವಿದೇಶಿಗರಿಗೆ ಇಲ್ಲಿನ ಬಗ್ಗೆ ಉತ್ತಮ ಅಭಿಪ್ರಾಯ ಮೂಡಲು ನಗರದ ಸೌಂದರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸದ್ಯ ನಗರದ ರಿಂಗ್ ರಸ್ತೆಗಳ ಸುತ್ತಮುತ್ತ ಕಸ ಎಸೆದು ಕಳೆಗುಂದಿವೆ. ಆದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಗಳು ಸ್ವಚ್ಛತೆ, ಸುಣ್ಣ ಬಣ್ಣದಿಂದ ಕಂಗೊಳಿಸುತ್ತಿವೆ. ಇದೇ ಮಾದರಿಯಲ್ಲಿ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಅನುದಾನ ಮೀಸಲಿಡಲಾಗುವುದು ಎಂದಿದ್ದಾರೆ. ಅಷ್ಟೇ ಅಲ್ಲದೆ ಚಾಲುಕ್ಯ ಸರ್ಕಲ್ ಮಾದರಿಯಲ್ಲಿ ನಗರದ ವಿವಿಧ ವೃತ್ತಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.