ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರಮುಖ ವ್ಯಾಪಾರಿ ತಾಣವನ್ನು ಹೊಂದಿರುವ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಹತ್ತು ಹಲವು ರೀತಿಯ ಅಭಿವೃದ್ಧಿ ಕೆಲಸಗಳ ಮೇಲೆ ಹಾಲಿ ಸಚಿವ ಅಶ್ವತ್ಥನಾರಾಯಣ ಮರು ಆಯ್ಕೆ ಬಯಸಿದ್ದರೆ, ಪ್ರತಿಪಕ್ಷ ಕಾಂಗ್ರೆಸ್ನಿಂದ ಮಾಜಿ ಸಚಿವ ಎಂ.ಆರ್.ಸೀತಾರಂ ಪುತ್ರ ರಕ್ಷಾ ರಾಮಯ್ಯ, ಬಿಕೆ ಹರಿಪ್ರಸಾದ್ ಆಪ್ತ ಅನೂಪ್ ನಡುವೆ ಟಿಕೆಟ್ ಪೈಪೋಟಿ ಇದೆ. ಒಂದು ಕಾಲದಲ್ಲಿ ಜನತಾ ಪರಿವಾರದ ತೆಕ್ಕೆಯಲ್ಲಿದ್ದ ಕ್ಷೇತ್ರದಲ್ಲಿ ಈಗ ಅಭ್ಯರ್ಥಿಗೂ ಹುಡುಕಾಡುವ ಪರಿಸ್ಥಿತಿ ಜೆಡಿಎಸ್ಗೆ ಇದೆ. ಈ ಎಲ್ಲದರ ನಡುವೆ ಮಲ್ಲೇಶ್ವರ ಕ್ಷೇತ್ರದ ಸಂಪೂರ್ಣ ಚಿತ್ರಣದ ಕುರಿತ ಪಕ್ಷಿನೋಟ ಇಲ್ಲಿದೆ.
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಮಲ್ಲೇಶ್ವರ ವಿಧಾನ ಸಭಾ ಕ್ಷೇತ್ರ ಕೂಡ ಒಂದು. ಮಲ್ಲೇಶ್ವರ, ಮತ್ತಿಕೆರೆ, ಅರಮನೆ ನಗರ, ರಾಜಮಹಲ್ ಗುಟ್ಟಹಳ್ಳಿ, ಸುಬ್ರಹ್ಮಣ್ಯನಗರ, ಗಾಯತ್ರಿ ನಗರ ವಾರ್ಡ್ಗಳನ್ನು ಹೊಂದಿರುವ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ಇತಿಹಾಸ ಪ್ರಸಿದ್ಧ ಕಾಡುಮಲ್ಲೇಶ್ವರ ದೇವಾಲಯದಿಂದ ಹೆಸರುವಾಸಿಯಾಗಿದೆ. ಗಣಪತಿ ದೇವಸ್ಥಾನ, ಗಾಯತ್ರಿ ಮಂದಿರ, ಗಂಗಮ್ಮನಗುಡಿ, ಸರ್ಕಲ್ ಮಾರಮ್ಮ ದೇವಾಲಯಗಳ ಜೊತೆಗೆ ಉದ್ಯಾನವನಗಳಿಗೆ ಹೇಳಿ ಮಾಡಿಸಿದ ಕ್ಷೇತ್ರವಾಗಿದೆ. ಸ್ಯಾಂಕಿಕೆರೆ ಲ್ಯಾಂಡ್ ಮಾರ್ಕ್ನಂತೆ ಅಭಿವೃದ್ಧಿಯಾಗಿದೆ.
ಪ್ರಮುಖ ವ್ಯಾಪಾರಿ ತಾಣಗಳಲ್ಲಿ ಮುಂಚೂಣಿಯಲ್ಲಿರುವ ಮಲ್ಲೇಶ್ವರ ಬ್ರಾಹ್ಮಣ ಸಮುದಾಯದ ಬಾಹುಳ್ಯ ಹೊಂದಿರುವ ಕ್ಷೇತ್ರವಾಗಿದೆ. ಬ್ರಾಹ್ಮಣ ಸಮುದಾಯದ ಮತದಾರರೇ ಇಲ್ಲಿ ನಿರ್ಣಾಯಕ. ಇಡೀ ಸಮುದಾಯ ಒಟ್ಟಾಗಿ ಯಾರ ಕಡೆ ವಾಲುತ್ತದೆಯೋ ಅವರು ಅನಾಯಾಸವಾಗಿ ಇಲ್ಲಿ ಗೆಲ್ಲುತ್ತಾರೆ. ಹಾಗಾಗಿಯೇ ಕಳೆದ ಮೂರು ಬಾರಿಯೂ ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ ಅನಾಯಾಸವಾಗಿ ಗೆಲುವುದು ಸಾಧಿಸಿ ಹ್ಯಾಟ್ರಿಕ್ ಗೆಲುವಿನ ನಂತರ ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
2,22,500 ಮತದಾರರಿರುವ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದ ಮತಗಳೇ ನಿರ್ಣಾಯಕವಾಗಿದೆ. 55 ಸಾವಿರ ಬ್ರಾಹ್ಮಣ ಮತದಾರರು, 41 ಸಾವಿರ ಒಕ್ಕಲಿಗ ಮತದಾರರು, 33,500 ಎಸ್ಸಿ-ಎಸ್ಟಿ ಮತದಾರರಿದ್ದು, 15 ಸಾವಿರ ತಮಿಳರು, 13 ಸಾವಿರ ತೆಲುಗರು, 8 ಸಾವಿರ ಮುಸ್ಲಿಂ ಸಮುದಾಯದವರು, 5 ಸಾವಿರ ಲಿಂಗಾಯತ, 5 ಸಾವಿರ ಕುರುಬರು, 4500 ಯಾದವ, 1500 ದೇವಾಂಗ, 1500 ತಿಗಳ ಸಮುದಾಯದ ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಪುರುಷ ಮತ್ತು ಮಹಿಳಾ ಮತದಾರರ ನಡುವಿನ ವ್ಯತ್ಯಾಸ 15 ಸಾವಿರಕ್ಕೂ ಕಡಿಮೆ ಇದೆ ಎನ್ನಲಾಗಿದೆ.
ಕ್ಷೇತ್ರದ ಇತಿಹಾಸ ನೋಡುವುದಾದರೆ 1957 ರಿಂದ 2018ರ ವರೆಗೂ ಒಟ್ಟು 14 ಚುನಾವಣೆಗಳು ನಡೆದಿವೆ. ಮೊದಲೆರಡು ಬಾರಿ ವೈಯಕ್ತಿಕ ವರ್ಚಸ್ಸಿನಿಂದಾಗಿ ಪಕ್ಷೇತರ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದರೆ, 1967 ಮತ್ತು 1972ರಲ್ಲಿ ಸಿಪಿಐ, 1978, 1983, 1985ರಲ್ಲಿ ಜನತಾ ಪಕ್ಷ, 1989, 1994ರಲ್ಲಿ ಜನತಾದಳ, 1999,2004ರಲ್ಲಿ ಕಾಂಗ್ರೆಸ್, 2008, 2013, 2018ರಲ್ಲಿ ಬಿಜೆಪಿ ಗೆದ್ದಿದೆ. ಜನತಾದಳದಿಂದ ಜೀವರಾಜ್ ಆಳ್ವ, ನಟ ಅನಂತ್ ನಾಗ್, ಕಾಂಗ್ರೆಸ್ನಿಂದ ಎಂ.ಆರ್.ಸೀತಾರಾಂ, ಬಿಜೆಪಿಯಿಂದ ಅಶ್ವತ್ಥನಾರಾಯಣ ಗೆದ್ದ ಪ್ರಮುಖರಾಗಿದ್ದಾರೆ. ಐದು ಬಾರಿ ಜನತಾ ಪರಿವಾರದ ಹಿಡಿತದಲ್ಲಿದ್ದ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಈಗ ಜನತಾದಳಕ್ಕೆ ಹಿಡಿತವಿಲ್ಲದಂತಾಗಿದೆ. ಎರಡು ಬಾರಿ ಗೆದ್ದಿರುವ ಕಾಂಗ್ರೆಸ್ ತೀವ್ರ ಸ್ಪರ್ಧೆ ಒಡ್ಡಲು ಮುಂದಾಗಿದೆ. ಆದರೆ, 2008ರವರೆಗೂ ಕ್ಷೇತ್ರದಲ್ಲಿ ಗುರುತಿಗೇ ಇಲ್ಲದಂತಿದ್ದ ಬಿಜೆಪಿ ಕ್ಷೇತ್ರ ಮರುವಿಂಗಡಣೆಯಾದ ನಂತರ ಸತತವಾಗಿ ಮೂರು ಬಾರಿ ಗೆದ್ದು ಕ್ಷೇತ್ರವನ್ನು ಭದ್ರಕೋಟೆಯನ್ನಾಗಿ ಮಾಡಿಕೊಂಡಿದೆ.
2018ರ ಫಲಿತಾಂಶವನ್ನು ಅವಲೋಕನ ಮಾಡುವುದಾದಲ್ಲಿ ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ 83,130 ಮತ ಪಡೆದರೆ ಎರಡನೇ ಸ್ಥಾನ ಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ಪಡೆದಿದ್ದು ಕೇವಲ 29,130 ಮತಗಳು ಮಾತ್ರ. ಮೂರನೇ ಸ್ಥಾನ ಪಡೆದ ಜೆಡಿಎಸ್ಗೆ ಸಿಕ್ಕಿದ್ದು 7,884 ಮತಗಳು. 54 ಸಾವಿರ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಕಳೆದ ಬಾರಿ ಗೆಲುವಿನ ನಗೆ ಬೀರಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಿ ಯಡಿಯೂರಪ್ಪ ಸರ್ಕಾರ ರಚನೆ ಮಾಡಿದ ವೇಳೆ ಉಪ ಮುಖ್ಯಮಂತ್ರಿಯಾಗಿ ಸರ್ಕಾರದ ಭಾಗವಾದ ಅಶ್ವತ್ಥನಾರಾಯಣ ನಂತರ ಬೊಮ್ಮಾಯಿ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಮುಂದುವರೆದಿದ್ದಾರೆ.
ಮಲ್ಲೇಶ್ವರದ ಮನೆ ಮನೆಗೂ ಅಶ್ವತ್ಥನಾರಾಯಣ ತಲುಪಿದ್ದಾರೆ. ಮಲ್ಲೇಶ್ವರ ಸಹಾಯ ಆ್ಯಪ್ ಮೂಲಕ ಸ್ಥಳೀಯರ ಅಹವಾಲು ಆಲಿಸಿ ಪರಿಹಾರ ಕಲ್ಪಿಸುವ ವಿನೂತನ ಪ್ರಯತ್ನ ನಡೆಸಿದ್ದು, ನಿರುದ್ಯೋಗಿ ಯುವಕರಿಗೆ ಯೂತ್ ಎಡ್ಜ್ ಕಾರ್ಯಕ್ರಮದ ಮೂಲಕ ಉದ್ಯೋಗಕ್ಕೆ ದಾರಿ ತೋರುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅವರಿಗೆ ಈ ಬಾರಿಯೂ ಬಿಜೆಪಿಯಿಂದ ಟಿಕೆಟ್ ಬಹುತೇಕ ಫಿಕ್ಸ್ ಆಗಿದೆ.
ಕಳೆದ ಮೂರು ಬಾರಿಯೂ ಅಭ್ಯರ್ಥಿಯನ್ನು ಬದಲಾಯಿಸುತ್ತಲೇ ಎರಡನೇ ಸ್ಥಾನ ಪಡೆದುಕೊಂಡು ಬಂದಿರುವ ಕಾಂಗ್ರೆಸ್ ಈ ಬಾರಿಯೂ ಅಭ್ಯರ್ಥಿ ಬದಲಾವಣೆ ಮಾಡುವುದು ಖಚಿತವಾಗಿದೆ. ಆ ಮೂಲಕ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಈ ಬಾರಿ ಮಲ್ಲೇಶ್ವರ ಕ್ಷೇತ್ರವನ್ನು ವಶಕ್ಕೆ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಬ್ರಾಹ್ಮಣ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಬಿಜೆಪಿಗೆ ಟಕ್ಕರ್ ಕೊಡಲು ತಂತ್ರರೂಪಿಸಿದೆ. ಅದಕ್ಕಾಗಿ ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿಗೆ ಗಾಳ ಹಾಕಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೂ, ಕಾಂಗ್ರೆಸ್ ನಾಯಕರು ಪ್ರಯತ್ನ ಕೈಬಿಟ್ಟಿಲ್ಲ.
ಈ ನಡುವೆ ಮಾಜಿ ಸಚಿವ ಎಂ.ಆರ್.ಸೀತಾರಾಂ ತಮ್ಮ ಪುತ್ರ ರಕ್ಷಾ ರಾಮಯ್ಯಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ಕೊಡಿಸಲು ಹರಸಾಹಸ ಪಡುತ್ತಿದ್ದಾರೆ. ರಕ್ಷಾ ರಾಮಯ್ಯ ಈ ಬಾರಿ ಮಲ್ಲೇಶ್ವರ ಕ್ಷೇತ್ರದನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇನ್ನೊಂದು ಕಡೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಆಪ್ತ ಅನೂಪ್ ಅಯ್ಯಂಗಾರ್ ಕೂಡ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಕೆಂಗಲ್ ಹನುಮಂತಯ್ಯ ಮೊಮ್ಮಗ ಶ್ರೀಪಾದರೇಣು, ಈಸ್ಟ್ ವೆಸ್ಟ್ ಸಮೂಹ ಸಂಸ್ಥೆಯ ರಶ್ಮಿ ರವಿಕಿರಣ್, ಶಫಿವುಲ್ಲಾ, ಮಾಜಿ ಮೇಯರ್ ಲಕ್ಕಣ್ಣ ಪುತ್ರ ಗಿರೀಶ್ ಲಕ್ಕಣ್ಣ ಕಣ್ಣಿಟ್ಟಿದ್ದಾರೆ. ಆದರೆ, ಕಾಂಗ್ರೆಸ್ ಯಾರಿಗೆ ಮಣೆ ಹಾಕಲಿದೆಯೋ ಎನ್ನುವುದು ಸಧ್ಯಕ್ಕೆ ನಿಗೂಢವಾಗಿದೆ. ಜನತಾ ಪರಿವಾರದ ಭದ್ರಕೋಟೆ ಈಗ ಛಿದ್ರಗೊಂಡಿದ್ದು ಜೆಡಿಎಸ್ಗೆ ಇಲ್ಲಿ ಅಷ್ಟಾಗಿ ನೆಲೆ ಇಲ್ಲ. ಆದರೂ, ಜೆಡಿಎಸ್ ಅಭ್ಯರ್ಥಿಯ ಹುಡುಕಾಟದಲ್ಲಿದೆ.
ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ ಬರುವುದಾದಲ್ಲಿ ಪ್ರಮುಖ ವಾಣಿಜ್ಯ ಪ್ರದೇಶವಿರುವ ಸಂಪಿಗೆ ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸಲಾಗಿದೆ. ಕೆಸಿ ಜನರಲ್ ಆಸ್ಪತ್ರೆಯನ್ನು ಉನ್ನತೀಕರಣ ಮಾಡಿದ್ದಾರೆ. ಕ್ಷೇತ್ರದಲ್ಲಿ ಸತತವಾಗಿ ಉದ್ಯೋಗ ಮೇಳ, ಕೌಶಲ ತರಬೇತಿ ಮೇಳಗಳನ್ನು ಆಯೋಜನೆ ಮಾಡಿಕೊಂಡು ಬರುತ್ತಾ ಯುವ ಸಮೂಹವನ್ನು ಆಕರ್ಷಿಸುವಲ್ಲಿ ಸಫಲರಾಗಿದ್ದಾರೆ. ಮಲ್ಲೇಶ್ವರ ಮಾರುಕಟ್ಟೆ ನಿರ್ಮಾಣ ಯೋಜನೆ ಕಾಮಗಾರಿಯೂ ಪ್ಲಸ್ ಪಾಯಿಂಟ್ ಆಗಿದೆ.
ಕ್ರಿಮಿನಲ್ ಪ್ರಕರಣ ಮತ್ತು ಆಸ್ತಿ ವಿವರಣೆ: ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರೂ ಆಗಿರುವ ಅಶ್ವತ್ಥನಾರಾಯಣ ಎಂಬಿಬಿಎಸ್ ಪದವೀಧರರು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗುವ ಮೂಲಕ ಮತ್ತು ಕಿರಿಯ ವೈದ್ಯರ ಸಂಘದ ಅಧ್ಯಕ್ಷರಾಗುವ ಮೂಲಕ ರಾಜಕೀಯದಲ್ಲಿ ತೊಡಗಿಸಿಕೊಂಡರು. 2018ರಲ್ಲಿ ಇವರ ಮೇಲೆ 1 ಕ್ರಿಮಿನಲ್ ಕೇಸ್ ದಾಖಲಾಗಿದ್ದು, ಕ್ರಮವಾಗಿ 2013 ಮತ್ತು 2008ರಲ್ಲಿ ಯಾವುದೇ ಕ್ರಿಮಿನಲ್ ಕೇಸ್ ದಾಖಲಾಗಿಲ್ಲ. 2018ರಲ್ಲಿ 21 ಕೋಟಿ ರೂ., 2013ರಲ್ಲಿ 15 ಕೋಟಿ ಮತ್ತು 2008ರಲ್ಲಿ 5 ಕೋಟಿ ಆಸ್ತಿ ಘೋಷಣೆ ಮಾಡಿದ್ದರು.
ಈ ವರೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಎನ್ಪಿ ಕ್ರಮವಾಗಿ ಮೂರು ಬಾರಿ ಗೆದ್ದುಕೊಂಡಿವೆ. ಸಿಪಿಐ, ಸಿಪಿಎಂ ಎರಡು ಬಾರಿ ಗೆದ್ದಿದ್ದರೆ, ಜೆಡಿ ಮತ್ತು ಐಎನ್ಡಿ ಕ್ರಮವಾಗಿ ಎರಡು ಬಾರಿ ಗೆಲುವು ಸಾಧಿಸಿವೆ.
ಇನ್ನು ಮಲ್ಲೇಶ್ವರ ಕ್ಷೇತ್ರ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದರೂ ಸಮಸ್ಯೆಗಳಿಂದ ಮುಕ್ತವಾಗಿ ಉಳಿದಿಲ್ಲ. ಸಂಚಾರ ದಟ್ಟಣೆಯೇ ಇಲ್ಲಿನ ಪ್ರಮುಖ ಸಮಸ್ಯೆಯಾಗಿದೆ. ವಾಹನ ನಿಲುಗಡೆ ಸಮಸ್ಯೆ ಹೆಚ್ಚಾಗುತ್ತಿದೆ. ಇದರಿಂದ ನಿವಾಸಿಗಳು ಕಿರಿಕಿರಿಗೊಳಗಾಗಬೇಕಾಗಿದೆ. ಕಸ ವಿಲೇವಾರಿಯೂ ದೊಡ್ಡ ಸಮಸ್ಯೆಯಾಗಿದೆ. ಈ ಎಲ್ಲದರ ನಡುವೆ ಯಾವ ಅಭ್ಯರ್ಥಿಗೆ ಈ ಬಾರಿ ಮಲ್ಲೇಶ್ವರ ಕ್ಷೇತ್ರದ ಮತದಾರ ಒಲವು ತೋರುತ್ತಾರೆ, ಯಾರನ್ನು ಗೆಲ್ಲಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಚಾಮರಾಜಪೇಟೆ ಕ್ಷೇತ್ರದಲ್ಲಿ ಪಕ್ಷಕ್ಕಿಂತ ಜಮೀರ್ ವರ್ಚಸ್ಸೇ ಹೆಚ್ಚು: ಈ ಬಾರಿ ರಣಕಣದ ಬದಲಾದ ರಾಜಕೀಯ ಲೆಕ್ಕಾಚಾರ ಏನು?