ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಕಾವು ದಿನೇ ದಿನೆ ಹೆಚ್ಚುತ್ತಿದೆ. ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ. ಹೀಗಾಗಿ, ಸಮರೋಪಾದಿಯಲ್ಲಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಗೆಲುವಿನ ವಿಶ್ವಾಸದೊಂದಿಗೆ ಎಲ್ಲರೂ ಚುನಾವಣಾ ಕಣಕ್ಕಿಳಿಯುತ್ತಿದ್ದಾರೆ. ಆದರೆ ಅದೆಷ್ಟೋ ಅಭ್ಯರ್ಥಿಗಳು ಚುನಾವಣೆಯಲ್ಲಿ ಠೇವಣಿಯನ್ನೇ ಕಳೆದುಕೊಂಡು ಹೀನಾಯ ಸೋಲು ಅನುಭವಿಸುತ್ತಾರೆ.
ಠೇವಣಿ ಮುಟ್ಟುಗೋಲು ಲೆಕ್ಕಾಚಾರವೇನು?: ವಿಧಾನಸಭೆ ಚುನಾವಣಾ ಭದ್ರತಾ ಠೇವಣಿ ಮೊತ್ತವನ್ನು ನಾಮಪತ್ರ ಸಲ್ಲಿಕೆ ವೇಳೆ ಕ್ಷೇತ್ರದ ಚುನಾವಣಾಧಿಕಾರಿಗೆ ಪಾವತಿಸಬೇಕು. ಪ್ರತಿ ಅಭ್ಯರ್ಥಿ 10 ಸಾವಿರ ರೂ. ಭದ್ರತಾ ಠೇವಣಿ ಇಡಬೇಕು. ಯೋಗ್ಯ ಅಭ್ಯರ್ಥಿಗಳೇ ಚುನಾವಣಾ ಕಣಕ್ಕಿಳಿಯಬೇಕು. ಯಾರೂ ಪ್ರಚಾರಕ್ಕಾಗಿ, ಬೇಕಾಬಿಟ್ಟಿ ಸ್ಪರ್ಧಿಸಬಾರದೆಂಬ ಉದ್ದೇಶದೊಂದಿಗೆ ಚುನಾವಣಾ ಆಯೋಗ ಅಭ್ಯರ್ಥಿಗಳಿಂದ ಭದ್ರತಾ ಠೇವಣಿ ಪಡೆಯುತ್ತದೆ.
ವಿಧಾನಸಭೆ ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ 10,000 ರೂ. ಭದ್ರತಾ ಠೇವಣಿ ಪಾವತಿಸಬೇಕು. ಪರಿಶಿಷ್ಟ ಸಮುದಾಯದ ಅಭ್ಯರ್ಥಿಗಳು 5,000 ರೂ. ಠೇವಣಿ ಪಾವತಿಸಬೇಕು. ಅಭ್ಯರ್ಥಿ ತಾನು ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಅರ್ಹ ಮತಗಳ 1/6 ಗಿಂತ ಹೆಚ್ಚಿಗೆ ಮತ ಗಳಿಸಬೇಕು. ಅಷ್ಟು ಮತಗಳಿಸಿದರೆ ಚುನಾವಣಾಧಿಕಾರಿಗೆ ಪಾವತಿಸಿದ ಠೇವಣಿ ಹಣ ಅಭ್ಯರ್ಥಿಗೆ ಮರಳಿಸಲಾಗುತ್ತದೆ. ಒಂದು ವೇಳೆ ಅಭ್ಯರ್ಥಿ 1/6 ಗಿಂತ ಕಡಿಮೆ ಮತಗಳಿಸಿದರೆ ಆತನ ಠೇವಣಿಯನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕುತ್ತದೆ. ಅಂದರೆ ಠೇವಣಿ ಮೊತ್ತವನ್ನು ಅಭ್ಯರ್ಥಿಗಳಿಗೆ ಮರುಪಾವತಿಸುವುದಿಲ್ಲ. ಕೆಲ ಅಭ್ಯರ್ಥಿಗಳು ಭರ್ಜರಿ ಮತಗಳೊಂದಿಗೆ ಜಯಭೇರಿ ಭಾರಿಸುತ್ತಾರೆ.
ಇನ್ನು ಹಲವು ಅಭ್ಯರ್ಥಿಗಳು ಹೀನಾಯ ಸೋಲು ಕಂಡು ಠೇವಣಿಯನ್ನೂ ಕಳೆದುಕೊಳ್ಳುತ್ತಾರೆ. ಅಭ್ಯರ್ಥಿಯೊಬ್ಬನ ಚುನಾವಣಾ ಠೇವಣಿ ಮುಟ್ಟುಗೋಲಾದರೆ ಆತನನ್ನು ಕ್ಷೇತ್ರದ ಜನರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ಅರ್ಥ.
2008ರಲ್ಲಿ ಮುಟ್ಟುಗೋಲಾದ ಠೇವಣಿ ಎಷ್ಟು?: 2008ರ ವಿಧಾನಸಭೆ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಒಟ್ಟು 2,242 ಅಭ್ಯರ್ಥಿಗಳು ಸ್ಪರ್ಧೆ ಎದುರಿಸಿದ್ದರು. ಆದರೆ, ಈ ಪೈಕಿ ಒಟ್ಟು 1,694 ಅಭ್ಯರ್ಥಿಗಳ ಚುನಾವಣಾ ಠೇವಣಿ ಮುಟ್ಟುಗೋಲು ಆಗಿದೆ. ಅಂದರೆ 1,694 ಅಭ್ಯರ್ಥಿಗಳು ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದರು. ಈ ಅಭ್ಯರ್ಥಿಗಳಿಗೆ ತಮ್ಮ ಠೇವಣಿ ಉಳಿಸಿಕೊಳ್ಳಲೂ ಸಾಧ್ಯವಾಗಿಲ್ಲ.
2008ರಲ್ಲಿ ಬಿಜೆಪಿ 224 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿತ್ತು. ಈ ಪೈಕಿ 110 ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದರು. ಆದರೆ ಬಿಜೆಪಿಯ 31 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಇತ್ತ ಕಾಂಗ್ರೆಸ್ ಪಕ್ಷ 222 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಈ ಪೈಕಿ 80 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಪಕ್ಷದಿಂದ ಒಟ್ಟು 11 ಅಭ್ಯರ್ಥಿಗಳ ಠೇವಣಿ ಮುಟ್ಟುಗೋಲು ಆಗಿತ್ತು.
ಅದರೆ, ಜೆಡಿಎಸ್ ಪಕ್ಷ 2008 ಚುನಾವಣೆಯಲ್ಲಿ 219 ಹುರಿಯಾಳುಗಳನ್ನು ಕಣಕ್ಕಿಳಿಸಿತ್ತು. ಈ ಪೈಕಿ 28 ಜೆಡಿಎಸ್ ಅಭ್ಯರ್ಥಿಗಳು ಜಯ ಸಾಧಿಸಿದ್ದರು. ಆದರೆ ಒಟ್ಟು 107 ಅಭ್ಯರ್ಥಿಗಳು ಹೀನಾಯ ಸೋಲು ಕಂಡು ತಮ್ಮ ಠೇವಣಿಯನ್ನೇ ಕಳೆದುಕೊಂಡರು. ಉಳಿದಂತೆ ಒಟ್ಟು 944 ಪಕ್ಷೇತರ ಅಭ್ಯರ್ಥಿಗಳ ಪೈಕಿ 923 ಅಭ್ಯರ್ಥಿಗಳ ಠೇವಣಿ ಮುಟ್ಟುಗೋಲು ಆಗಿತ್ತು.
2013ರ ಚುನಾವಣೆಯ ಠೇವಣಿ ಜಪ್ತಿ?: 2013ರ ವಿಧಾನಸಭೆ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಒಟ್ಟು 2,948 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದರು. ಈ ಪೈಕಿ 2,419 ಅಭ್ಯರ್ಥಿಗಳ ಭದ್ರತಾ ಠೇವಣಿ ಮುಟ್ಟುಗೋಲಾಗಿದೆ ಎಂದು ಚುನಾವಣಾ ಆಯೋಗ ತನ್ನ ಅಂಕಿಅಂಶದಲ್ಲಿ ತಿಳಿಸಿದೆ.
2013ರ ಚುನಾವಣೆಯಲ್ಲಿ ಬಿಜೆಪಿ 223 ಅಭ್ಯರ್ಥಿಗಳು ಸ್ಪರ್ಧೆಗೆ ಇಳಿಸಿತ್ತು. ಈ ಪೈಕಿ 40 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಆದರೆ ಯಡಿಯೂರಪ್ಪರ ಬಂಡಾಯದ ಬಿಸಿಗೆ ನಲುಗಿದ ಬಿಜೆಪಿ ಬರೋಬ್ಬರಿ 110 ತನ್ನ ಅಭ್ಯರ್ಥಿಗಳ ಠೇವಣಿ ಕಳೆದುಕೊಂಡು ಹೀನಾಯ ಸೋಲು ಕಂಡಿತು.
ಇತ್ತ ಕಾಂಗ್ರೆಸ್ ಪಕ್ಷ ಸ್ಪರ್ಧಿಸಿದ್ದ 224 ಕ್ಷೇತ್ರಗಳ ಪೈಕಿ 122 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. 23 ಕೈ ಅಭ್ಯರ್ಥಿಗಳ ಠೇವಣಿ ಮುಟ್ಟುಗೋಲಾಗಿತ್ತು. ಇತ್ತ ಜೆಡಿಎಸ್ ಪಕ್ಷ ಸ್ಪರ್ಧಿಸಿದ್ದ 222 ಕ್ಷೇತ್ರಗಳ ಪೈಕಿ 40 ಸೀಟು ಗೆದ್ದಿತ್ತು. ಆದರೆ, ಜೆಡಿಎಸ್ ಕೂಡ ಒಟ್ಟು 110 ತೆನೆ ಅಭ್ಯರ್ಥಿಗಳ ಠೇವಣಿ ಮುಟ್ಟುಗೋಲು ಆಗಿತ್ತು.
ಅಂದು ಯಡಿಯೂರಪ್ಪ ರಚಿಸಿದ್ದ ಕೆಜೆಪಿ ಪಕ್ಷ ಸ್ಪರ್ಧಿಸಿದ್ದ 204 ಕ್ಷೇತ್ರಗಳ ಪೈಕಿ 6 ಸ್ಥಾನ ಗೆದ್ದಿತ್ತು. 146 ಕೆಜೆಪಿ ಅಭ್ಯರ್ಥಿಗಳ ಠೇವಣಿ ಮುಟ್ಟುಗೋಲು ಆಗಿತ್ತು. ಇನ್ನು 1,217 ಪಕ್ಷೇತರ ಅಭ್ಯರ್ಥಿಗಳ ಪೈಕಿ 9 ಮಂದಿ ಗೆದ್ದಿದ್ದರೆ, ಒಟ್ಟು 1,190 ಪಕ್ಷೇತರು ಚುನಾವಣಾ ಠೇವಣಿ ಕಳೆದುಕೊಂಡಿದ್ದಾರೆ.
2018ರಲ್ಲಿ ಠೇವಣಿ ಮುಟ್ಟುಗೋಲು ಏನಿದೆ?: 2018ರ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಒಟ್ಟು 2,892 ಅಭ್ಯರ್ಥಿಗಳು ಸ್ಪರ್ಧೆ ಎದುರಿಸಿದ್ದರು. ಈ ಪೈಕಿ ಒಟ್ಟು 1,146 ಅಭ್ಯರ್ಥಿಗಳ ಠೇವಣಿ ಜಪ್ತಿಯಾಗಿದೆ. 1,146 ಅಭ್ಯರ್ಥಿಗಳು ಠೇವಣಿ ಕಳೆದು ಹೀನಾಯ ಸೋಲು ಕಂಡಿದ್ದರು.
2018ರಲ್ಲಿ ಬಿಜೆಪಿ ಪಕ್ಷ ತನ್ನ 224 ಅಭ್ಯರ್ಥಿಗಳ ಪೈಕಿ 104 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಆದರೆ 39 ಬಿಜೆಪಿ ಅಭ್ಯರ್ಥಿಗಳು ತಮ್ಮ ಠೇವಣಿ ಕಳೆದುಕೊಂಡು ಹೀನಾಯ ಸೋಲು ಕಾಣಬೇಕಾಯಿತು. ಇತ್ತ ಕಾಂಗ್ರೆಸ್ ಪಕ್ಷ ಸ್ಪರ್ಧಿಸಿದ್ದ ತನ್ನ 223 ಅಭ್ಯರ್ಥಿಗಳ ಪೈಕಿ 80 ಕೈ ಅಭ್ಯರ್ಥಿಗಳು ಗೆದ್ದಿದ್ದರು. 13 ಕೈ ಅಭ್ಯರ್ಥಿಗಳ ಠೇವಣಿ ಮುಟ್ಟುಗೋಲಾಗಿದೆ.
202 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್ ಪಕ್ಷದ 37 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಆದರೆ ಒಟ್ಟು 107 ತೆನೆ ಅಭ್ಯರ್ಥಿಗಳ ಠೇವಣಿ ಕಳೆದುಕೊಂಡು ಹೀನಾಯ ಸೋಲು ಕಂಡಿದ್ದರು. ಇನ್ನು ಒಟ್ಟು 1,153 ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದರು, ಈ ಪೈಕಿ 1,138 ಪಕ್ಷೇತರರು ಠೇವಣಿ ಕಳೆದುಕೊಂಡಿದ್ದರು.
ಇದನ್ನೂಓದಿ: ಚುನಾವಣೆ ಮುನ್ನ ದೊಡ್ಡ ಸದ್ದು ಮಾಡಿದ್ದ ಮೇಕೆದಾಟು, ಚುನಾವಣೆ ಬರ್ತಿದ್ದಂತೆ ಮರೆತೋಯ್ತೇ?