ಬೆಂಗಳೂರು: ಕಾಂಗ್ರೆಸ್ ರಾಜಕೀಯ ಪಕ್ಷವಲ್ಲ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಒಂದು ವೇದಿಕೆಯಾಗಿತಷ್ಟೇ. ಭವಿಷ್ಯದಲ್ಲಿ ಕಾಂಗ್ರೆಸ್ ಹೆಸರಿನಲ್ಲಿ ಅಧಿಕಾರ ದುರುಪಯೋಗಪಡಿಸಿಕೊಳ್ಳಬಾರದು ಎಂದು ಗಾಂಧೀಜಿ ಅಂದೇ ಎಚ್ಚರಿಸಿದ್ದರು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಕುಟುಕಿದ್ದಾರೆ.
ಗಾಂಧಿ ಜಯಂತಿ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ
ಗಾಂಧಿ ಚಿಂತಕ ಜಿ.ಎಸ್ ಜಯದೇವ ಅವರಿಗೆ ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ನಂತರ ಕೆಂಪುಕೋಟೆ ಬಳಿ ಮೊದಲ ಬಾರಿ ರಾಷ್ಟ್ರ ಧ್ವಜ ಹಾರಿಸುವ ಶುಭ ಗಳಿಗೆಯಲ್ಲಿ ಗಾಂಧೀಜಿ ಭಾಗವಹಿಸಲಿರಲಿಲ್ಲ. ಇದನ್ನು ಪ್ರಶ್ನಿಸಿದ ಕಾಂಗ್ರೆಸ್ ಮುಖಂಡರಿಗೆ, ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷ ಬಳಸಿ ಅಧಿಕಾರಿ ದುರುಪಯೋಗವಾಗಲಿದೆ. ಸ್ವಾತಂತ್ರ್ಯ ಸಂಗ್ರಾಮ ವೇಳೆ ಕಾಂಗ್ರೆಸ್ ಎಂಬ ಹೆಸರಿನಲ್ಲಿ ಎಲ್ಲರೂ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದೇವೆ ಅಷ್ಟೇ. ಭವಿಷ್ಯದಲ್ಲಿ ಕಾಂಗ್ರೆಸ್ ಹೆಸರಿನ ಪಕ್ಷ ಇರಕೂಡದು ಎಂದೇ ದೂರದೃಷ್ಟಿ ಹೊಂದಿದ್ದನ್ನು ಯಡಿಯೂರಪ್ಪ ಅವರು ಸ್ಮರಿಸಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪುರಸ್ಕೃತ ಜಿ.ಎಸ್.ಜಯದೇವ, ಚಾಮರಾಜ ನಗರದಲ್ಲಿ ಶಾಲೆ ನಡೆಸುತ್ತಿದ್ದು, ಇದಕ್ಕಾಗಿ ಏಳು ಎಕರೆ ಜಮೀನು ಬೇಕೆಂದು ಕಳೆದ ಏಳು ವರ್ಷಗಳ ಹಿಂದೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಈವರೆಗೂ ಯಾರು ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ಯಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಎಸ್ವೈ, ಇನ್ನೆರಡು ದಿನಗಳಲ್ಲಿ ಕಡತ ತರಿಸಿಕೊಂಡು ಜಮೀನು ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಮಾತನಾಡಿ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆಯನ್ನು ಕೇಂದ್ರ ಸರ್ಕಾರ ವಿಶಿಷ್ಟವಾಗಿ ಆಚರಿಸಿರುವುದು ಖುಷಿ ತಂದಿದೆ. ಅಸಹಕಾರ ಚಳವಳಿ ಹಾಗೂ ಚಲೇಜಾವ್ ಹೋರಾಟ ಹಾಗೂ ಉಪವಾಸದ ಮೂಲಕ ಹೋರಾಟದ ಅಸ್ತ್ರವಾಗಿ ಬಳಸಿಕೊಂಡು ದೇಶಕ್ಕೆ ಸ್ವಾತಂತ್ರ್ಯ ತಂದಿದ್ದು ಮೆಚ್ಚಲೇಬೇಕಾದ ವಿಷಯ. ಗಾಂಧಿ ದೇಶದ ಐಕ್ಯತೆ ಪ್ರತೀಕ. ಅದರೆ ಇತ್ತೀಚಿನ ದಿನಗಳಲ್ಲಿ ಗಾಂಧಿಜೀ ಕುರಿತಂತೆ ಕೆಲವರು ಅವಹೇಳನಕಾರಿ ಮಾತನಾಡುವ ಮೂಲಕ ದೇಶದ ಐಕ್ಯತೆ ಧಕ್ಕೆ ತರುತ್ತಿದ್ದಾರೆ ಎಂದು ಟೀಕಿಸಿದರು. ರಾಜ್ಯದ ವಿವಿಧ ಪ್ರದೇಶಗಳಲ್ಲಿ ಗಾಂಧೀಜಿ ಭೇಟಿ ನೀಡಿರುವ ಸ್ಥಳಗಳನ್ನು ಗುರುತಿಸಿಕೊಂಡು ಪ್ರವಾಸೋದ್ಯಮ ಕ್ಷೇತ್ರಗಳಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಮಾತನಾಡಿ ಗಾಂಧಿ ಜಯಂತಿ ಪ್ರಯುಕ್ತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಚಾರ ಸಂಕಿರಣ ಹಾಗೂ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಗಾಂಧಿ ಚಿಂತನೆಯನ್ನು ಪಸರಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಬಳ್ಳಾರಿ, ಹಾಸನ ಚಿಕ್ಕಬಳ್ಳಾಪುರ ಸೇರಿದಂತೆ 15 ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಾಣ ಮಾಡಲಾಗುತ್ತಿದೆ. ಪ್ರತಿ ಭವನವನ್ನು 3 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.