ಬೆಂಗಳೂರು: ಕೆಂಗೇರಿ ಉಪನಗರ ಕೊಮ್ಮಘಟ್ಟ ರಸ್ತೆಯ ವಿದ್ಯುತ್ ಚಿತಾಗಾರದಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೂ ನಿರಂತರವಾಗಿ ಕೋವಿಡ್ ನಿಂದ ಮೃತಪಟ್ಟವರ ಪಾರ್ಥಿವ ಶರೀರ ಸುಡುತ್ತಿದ್ದು ದಟ್ಟ ಹೊಗೆ ಬರುತ್ತಲೇ ಇದೆ ಎಂದು ಅಲ್ಲಿನ ನಿವಾಸಿಗಳು ದೂರುತ್ತಿದ್ದಾರೆ.
ಹೀಗಾಗಿ ಜೀವಂತವಾಗಿದೆಯೇ ಬಿಬಿಎಂಪಿ ಆರೋಗ್ಯ ವಿಭಾಗ? ಇವರಿಗೆ ಸಾರ್ವಜನಿಕ ಆರೋಗ್ಯದ ಕಾಳಜಿ ಇಲ್ಲವೇ ಎನ್ನುವ ಪ್ರಶ್ನೆ ಎದ್ದಿದೆ. ಏಕಕಾಲದಲ್ಲಿ ಎರಡು ಶವ ಸಂಸ್ಕಾರಕ್ಕೆ ಅವಕಾಶವಿದ್ದು, ಗಂಟೆಗೆ 2 ಶವ ಸಂಸ್ಕಾರ ಆಗುತ್ತಿದೆ ಎಂದರೂ ದಿನ 14 -16ಗಂಟೆ ಅವಧಿಯಲ್ಲಿ 25 -30 ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಸ್ಕಾರ ನಡೆಯುತ್ತಿದೆ. ಪಿಪಿಇ ಕಿಟ್ ಸಹಿತ ಪಾರ್ಥಿವ ಶರೀರ ದಹನ ಮಾಡುತ್ತಿರುವುದರಿಂದ ಇಡೀ ಪ್ರದೇಶದಲ್ಲಿ ದುರ್ನಾತ ಬರುತ್ತಿದೆ ಎಂದು ಕೆಂಗೇರಿ ಉಪನಗರದ ಕೆ.ಹೆಚ್.ಬಿ ಬಡಾವಣೆಯ ನಿವಾಸಿ ಟಿ. ಎಂ ಸತೀಶ್ ತಿಳಿಸುತ್ತಾರೆ.
2013ರಲ್ಲಿ ಈ ಚಿತಾಗಾರ ನಿರ್ಮಿಸಿದಾಗ ಇದು ಊರಿನಿಂದ ಹೊರಗಿತ್ತು. ಈಗ ಕರ್ನಾಟಕ ಗೃಹ ಮಂಡಳಿ ಬಡಾವಣೆ, ವಿಶ್ವೇಶ್ವರಯ್ಯ ಬಡಾವಣೆ, ಬಂಡೇಮಠ ಬಡಾವಣೆ ಹಾಗೂ ಹಲವು ರೆವಿನ್ಯೂ ಬಡಾವಣೆಗಳಾಗಿದ್ದು, ಸಾವಿರಾರು ಜನರು ವಾಸಿಸುತ್ತಿದ್ದಾರೆ. ಇವರೆಲ್ಲರೂ ಪ್ರಾಣವಾಯುವೇ ಕಲುಷಿತವಾಗುತ್ತಿರುವ ಬಗ್ಗೆ ಆತಂಕಗೊಂಡಿದ್ದಾರೆ. ಸ್ಕ್ರಬರ್ ತಂತ್ರಜ್ಞಾನ ಅಳವಡಿಸಲಾಗಿದ್ದರೂ, ಬೂದಿ, ಹೊಗೆ ವಾತಾವರಣ ಸೇರುತ್ತಿದೆ. ನೆಮ್ಮದಿಯಿಂದ ಉಸಿರಾಡಲೂ ಆಗದೇ ಬಡಾವಣೆಯ ಜನ ಮನೆ ಬಾಗಿಲು, ಕಿಟಕಿ ಹಾಕಿಕೊಂಡು ಜೀವನ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೀಗೆ ನಿರಂತರವಾಗಿ ಶವ ಸಂಸ್ಕಾರದ ಹೊಗೆ ಕೆಂಗೇರಿ ಸುತ್ತಮುತ್ತಲ ಪ್ರದೇಶದಲ್ಲಿ ಆವರಿಸುತ್ತಿದ್ದರೆ ಅದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಆಗುವ ಹಾನಿ ಅಂದಾಜು ಮಾಡುವುದೂ ಕಷ್ಟಸಾಧ್ಯ, ಹೀಗಾಗಿ ತತ್ ಕ್ಷಣವೇ ಚಿಮಣಿಯನ್ನು ಎತ್ತರಿಸಬೇಕು, ಈ ಚಿತಾಗಾರವನ್ನು ಹೊರವಲಯಕ್ಕೆ ಸ್ಥಳಾಂತರಿಸಬೇಕು ಎಂದು ಹಿರಿಯ ಪತ್ರಕರ್ತ ಟಿ.ಎಂ. ಸತೀಶ್ ಒತ್ತಾಯಿಸಿದ್ದಾರೆ.
ಬಿಬಿಎಂಪಿ ಆಯುಕ್ತರಿಗೆ, ಆರೋಗ್ಯ ಇಲಾಖೆಯ ವಿಶೇಷ ಆಯುಕ್ತರಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಬಿಬಿಎಂಪಿ ಆರೋಗ್ಯ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಏನು ಮಾಡುತ್ತಿದೆ? ಈ ನಿರಂತರ ದಟ್ಟ ಹೊಗೆ ನೋಡಿದರೆ, ಬೆಂಗಳೂರಿನಲ್ಲಿ ಕೋವಿಡ್ನಿಂದ ಸಾಯುತ್ತಿರುವವರ ನಿಜವಾದ ಸಂಖ್ಯೆ ಎಷ್ಟು? ಎನ್ನುವ ಪ್ರೆಶ್ನೆಯೂ ಎದ್ದಿದೆ.