ನವದೆಹಲಿ/ಬೆಂಗಳೂರು: ಅಕ್ರಮ ಡಿನೋಟಿಫಿಕೇಷನ್ ಪ್ರಕರಣದಲ್ಲಿ ತನಿಖೆ ನಡೆಸುವಂತೆ ಹೈಕೋರ್ಟ್ ನೀಡಿರುವ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಚಿವ ಮುರುಗೇಶ್ ನಿರಾಣಿ ಅವರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ಇಂದು ನಡೆಯಲಿದೆ.
2010-11ರಲ್ಲಿ ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ವಸತಿ ಯೋಜನೆಗೆ 26 ಎಕರೆ ಭೂಮಿ ಮಂಜೂರು ಮಾಡಿ ನಂತರ ನಕಲಿ ದಾಖಲೆ ಹಾಗೂ ನಕಲಿ ಸಹಿ ಬಳಸಿ ಆ ಭೂಮಿಯನ್ನು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ತಮ್ಮಿಂದ ಹಿಂದಕ್ಕೆ ಪಡೆದಿದ್ದಾರೆ ಎಂದು ಉದ್ಯಮಿ ಎ.ಅಲಂ ಪಾಷಾ ಅವರು ಆರೋಪ ಮಾಡಿದ್ದರು. ಈ ಸಂಬಂಧ ಅವರು ಲೋಕಾಯುಕ್ತಕ್ಕೆ ಖಾಸಗಿ ದೂರು ದಾಖಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್ಐಆರ್ ಹಾಗೂ ವಿಶೇಷ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಬಿ.ಎಸ್. ಯಡಿಯೂರಪ್ಪ 2019ರಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಜನವರಿ 5ರಂದು ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಜಾಗೊಳಿಸಿ, ವಿಚಾರಣೆ ನಡೆಸುವಂತೆ ಆದೇಶಿಸಿತ್ತು.
ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬಡೆ ಹಾಗೂ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಹಾಗೂ ವಿ.ರಾಮಸುಬ್ರಮಣಿಯಮ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಇವರು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ಇಂದು ನಡೆಸಲಿದೆ.