ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ಒಂದು ತಿಂಗಳಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಏರಿಕೆಯಾಗಿರುತ್ತಿರುವುದು ಆರೋಗ್ಯ ಇಲಾಖೆಯ ಅಂಕಿ ಅಂಶಗಳಿಂದ ತಿಳಿದುಬಂದಿದೆ. ಕಳೆದ ಒಂದು ತಿಂಗಳಲ್ಲಿ ಬೆಂಗಳೂರು ಪೂರ್ವ, ಬೆಂಗಳೂರು ದಕ್ಷಿಣ ಹಾಗೂ ಮಹದೇವಪುರ ವಲಯಗಳಲ್ಲಿ ಅತಿ ಹೆಚ್ಚು ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ.
ಆಗಸ್ಟ್ ತಿಂಗಳಿನಲ್ಲಿಯೇ 2,374 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದವು. ಮುಂದುವರೆದು ಸೆಪ್ಟೆಂಬರ್ ಪ್ರಾರಂಭದಿಂದ 20 ದಿನಗಳಲ್ಲಿಯೇ 2,182 ಪ್ರಕರಣಗಳು ದಾಖಲಾಗಿವೆ. ಪ್ರತಿದಿನ ಸುಮಾರು 100 ಜನರಲ್ಲಿ ಡೆಂಗ್ಯೂ ಕಾಣಿಸಿಕೊಳ್ಳುತ್ತಿರುವುದು ಆತಂಕ ಹೆಚ್ಚಾಗಲು ಕಾರಣವಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಪ್ರಕರಣ : ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ ಜನವರಿ 1ರಿಂದ ಸೆ.19ರ ವರೆಗೆ 5,220 ಪ್ರಕರಣಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ಪತ್ತೆಯಾಗಿವೆ. ಉಳಿದಂತೆ ಅತಿ ಹೆಚ್ಚು ಡೆಂಗ್ಯೂ ಹರಡಿರುವುದು ಮೈಸೂರು ಹಾಗೂ ಉಡುಪಿ ಜಿಲ್ಲೆಯಲ್ಲಿ ಎಂದು ಹೇಳಲಾಗಿದೆ. ಈ ವರ್ಷ ರಾಜ್ಯದಲ್ಲಿ ಪತ್ತೆಯಾಗಿರುವ ಡೆಂಗ್ಯೂ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ರಾಜಧಾನಿಯಲ್ಲಿ ದಾಖಲಾಗಿವೆ.
ರಾಜ್ಯದ ಒಟ್ಟಾರೆ ಡೆಂಗ್ಯೂ ಪ್ರಕರಣಗಳನ್ನು ಗಮನಿಸಿದರೆ ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರಿನ ಪೂರ್ವ, ದಕ್ಷಿಣ ಮತ್ತು ಮಹದೇವಪುರ ವಲಯಗಳಲ್ಲಿ ಹೆಚ್ಚು ಡೆಂಗ್ಯೂ ಕೇಸ್ಗಳು ವರದಿಯಾಗಿವೆ. ಸುಮಾರು 6 ಸಾವಿರ ಪ್ರಕರಣಗಳು ಜನವರಿಯಿಂದ ಇಲ್ಲಿಯವರೆಗೆ ದಾಖಲಾಗಿದ್ದು, ಈ ಬಗ್ಗೆ ಆರೋಗ್ಯ ಸಚಿವರ ಗಮನಕ್ಕೆ ಕೂಡ ತರಲಾಗಿದೆ ಎಂದು ಆರೋಗ್ಯ ಇಲಾಖೆಯ ನಿರ್ದೇಶಕ ಶರೀಫ್ ತಿಳಿಸಿದ್ದಾರೆ.
ಡೆಂಗ್ಯೂ ಹರಡದಂತೆ ಸೂಕ್ತ ಕ್ರಮ : ಡೆಂಗ್ಯೂ ಹರಡದಂತೆ ತಡೆಯಲು ಸೂಕ್ತ ಮಾರ್ಗಸೂಚಿಗಳನ್ನು ಮತ್ತು ರೋಗವನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಂಡಿದ್ದೇವೆ. ಆಶಾ ಕಾರ್ಯಕರ್ತರು ಸೇರಿದಂತೆ ಹಲವು ಏಜೆನ್ಸಿಗಳ ನೌಕರರು ಮನೆಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಮಳೆ ನೀರು ಸಂಗ್ರಹವಾಗಿದ್ದರೆ ಸೊಳ್ಳೆಗಳು ಉತ್ಪತ್ತಿಯಾಗುವ ಸಂಭವವಿದೆ. ಈ ಕುರಿತು ತಿಳಿಹೇಳಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಒಟ್ಟು 9000 ಪ್ರಕರಣಗಳು ಪತ್ತೆ : ಪಾಲಿಕೆಯ ವತಿಯಿಂದ ಫಾಗಿ ಸೇರಿದಂತೆ ಸೊಳ್ಳೆಗಳ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಬಾಲಸುಂದರ್ ನೇತೃತ್ವದಲ್ಲಿ ನಗರದಲ್ಲಿ ಹಲವು ರೋಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದಿನ ಕೆಲವೇ ವಾರಗಳಲ್ಲಿ ರೋಗ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು. ಒಟ್ಟಾರೆಯಾಗಿ ಇಲ್ಲಿಯವರೆಗೆ ಸುಮಾರು 6000 ಪ್ರಕರಣಗಳು ಬೆಂಗಳೂರಿನಲ್ಲಿಯೇ ದಾಖಲಾಗಿದೆ. ಉಳಿದಂತೆ ರಾಜ್ಯದಲ್ಲಿ ಸರಿಸುಮಾರು 3000 ಪ್ರಕರಣಗಳು ಕಂಡುಬಂದಿವೆ. ಒಟ್ಟಾರೆಯಾಗಿ 9000 ಪ್ರಕರಣಗಳು ಕರ್ನಾಟಕ ರಾಜ್ಯದಲ್ಲಿ ದಾಖಲಾಗಿವೆ ಎಂದು ತಿಳಿಸಿದರು.
ಇದನ್ನೂ ಓದಿ : ವಿಜಯನಗರ : ಶಂಕಿತ ಡೆಂಗ್ಯೂಗೆ ಶಾಲಾ ಬಾಲಕಿ ಬಲಿ