ಬೆಂಗಳೂರು: ಅನಧಿಕೃತ ಕಟ್ಟಡಗಳ ವಿಚಾರವಾಗಿ ಹೈಕೋರ್ಟ್ ಚಾಟಿ ಬೀಸಿದ ಹಿನ್ನೆಲೆಯಲ್ಲಿ ಪಾಲಿಕೆ ಇದೀಗ ಎಚ್ಚೆತ್ತುಕೊಂಡಿದೆ.
ಪ್ಲಾನ್ ಸ್ಯಾಂಕ್ಷನ್ ಪಡೆದಿದ್ರೂ ಸಹ ನಿಯಮ ಬಾಹಿರವಾಗಿ ಕಟ್ಟಿದ ಕಟ್ಟಡದ ಮೇಲೆ ಕ್ರಮಕೈಗೊಳ್ಳಲು ಪಾಲಿಕೆ ಮುಂದಾಗಿದೆ. ಮಾಲೀಕರಿಗೆ ಈ ಮುಂಚೆಯೇ ನೋಟಿಸ್ ನೀಡಿದ್ದರೂ ಕೂಡ ಎಚ್ಚೆತ್ತುಕೊಳ್ಳದ ಕಾರಣ ಪಾಲಿಕೆ ತಾನೆ ಕಟ್ಟಡ ಕೆಡವಲು ನಿರ್ಧರಿಸಿದೆ. ಅದಕ್ಕೆ ತಗುಲುವ ವೆಚ್ಚವನ್ನೂ ಮಾಲೀಕರೇ ಭರಿಸಬೇಕು ಎಂಬುದನ್ನೂ ಪಾಲಿಕೆ ಸ್ಪಷ್ಟಪಡಿಸಿದೆ.
ಬಿಡಿಎ ಕೇಂದ್ರ ಕಚೇರಿ ಪಕ್ಕದಲ್ಲೇ ಎಂಟು ಅಂತಸ್ತಿನ ಬೃಹತ್ ಕಟ್ಟಡವೊಂದನ್ನು ಕಟ್ಟಲಾಗುತ್ತಿದೆ. ಕಟ್ಟಡದ ಮಾಲೀಕರು ನೋಟಿಸ್ ನೀಡಿದ್ರೂ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಇದೀಗ ಕಟ್ಟಡವನ್ನು ಕೆಡವಲು ಪಾಲಿಕೆ ಮುಂದಾಗಿದೆ.
ಕಟ್ಟಡ ಕೆಡವದಂತೆ ಬೆದರಿಕೆ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಬಿಬಿಎಂಪಿ ಪ್ಲಾನ್ ಪ್ರಕಾರ ಮೂರು ಅಂತಸ್ತಿನ ಕಟ್ಟಡ ಮಾತ್ರ ಕಟ್ಟಬೇಕು. ಆದರೆ, ಪಾಲಿಕೆ ನಿಯಮ ಉಲ್ಲಂಘಿಸಿ 8 ಅಂತಸ್ಥಿನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಅಷ್ಟೇ ಅಲ್ಲ, ಸೆಟ್ ಬ್ಯಾಕ್ ಅಂತಾ ಇಂತಿಷ್ಟು ಜಾಗವನ್ನು ಕಟ್ಟಡದ ಅಕ್ಕಪಕ್ಕದಲ್ಲಿ ಬಿಡಬೇಕು. ಆದರೆ, ಈ ಎಲ್ಲಾ ನಿಯಮವನ್ನೂ ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ.
ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾಕಷ್ಟು ಬಾರಿ ಪಾಲಿಕೆ ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್ ಹಾಗೂ ಇನ್ನಿತರೆ ಸದಸ್ಯರು ಕೂಡ ಅಧಿಕಾರಿಗಳಿಗೆ ಸೂಚಿಸಿದ್ದರೂ ಈಗಾಗಲೇ ಕಟ್ಟಡ ಕೆಡವಬೇಕು ಎಂಬ ಆದೇಶ ಇದ್ದರೂ ಸಿಎಂ ಯಡಿಯೂರಪ್ಪ ಹೆಸರು ಹೇಳಿಕೊಂಡು ಪಾಲಿಕೆ ಅಧಿಕಾರಿಗಳನ್ನು ಹೆದರಿಸುತ್ತಿದ್ದಾರೆ ಎಂದು ನೇತ್ರಾ ನಾರಾಯಣ್ ಆರೋಪಿಸಿದ್ದಾರೆ.
ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಒತ್ತಡಕ್ಕೂ ಮಣಿಯದೆ ಕಟ್ಟಡ ತೆರವುಗೊಳಿಸುವುದಾಗಿ ಮೇಯರ್ ಸ್ಪಷ್ಟಪಡಿಸಿದ್ದಾರೆ. ಆ ಕಟ್ಟಡದ ಜಾಗ ಜಗದೀಶ್ ಎಂಬ ವ್ಯಕ್ತಿಗೆ ಸೇರಿದ್ದು ಎನ್ನಲಾಗ್ತಿದೆ. ಕಟ್ಟಡ ತೆರವುಗೊಳಿಸುವ ಬಗ್ಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ನಾಳೆ ಒಡೆಯುವ ಸಾಧ್ಯತೆ ಇದ್ದು, ಒತ್ತಡಗಳು ಬಂದರೆ ಮುಂದೂಡಿಕೆಯಾಗುವ ಸಾಧ್ಯತೆಯೂ ಇದೆ.