ಬೆಂಗಳೂರು: ಅಡಿಕೆಯ ಕನಿಷ್ಠ ಆಮದಿಗೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಲು ಶೀಘ್ರದಲ್ಲೇ ಒಂದು ನಿಯೋಗ ಭೇಟಿ ಮಾಡಲು ನಿರ್ಣಯ ಆಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಅಡಿಕೆ ಕಾರ್ಯಪಡೆ ಸಭೆಯ ಬಳಿಕ ವಿಕಾಸಸೌಧದಲ್ಲಿ ಮಾತನಾಡಿದ ಅವರು, ಇವತ್ತು ಅಡಿಕೆ ಕಾರ್ಯಪಡೆ ಸಭೆ ಮಾಡಿದ್ದೇವೆ. ವಿಶೇಷವಾಗಿ ಅಡಿಕೆ ಆರೋಗ್ಯಕ್ಕೆ ಆರೋಗ್ಯಕರ ಅಲ್ಲ ಹಾನಿಕಾರಕ ಎಂದು ಹಿಂದಿನ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ವರದಿ ಸಲ್ಲಿಸಿತ್ತು. ಅದರ ಕೇಸ್ ಇವತ್ತು ಕೂಡಾ ಸುಪ್ರೀಂ ಕೋರ್ಟ್ನಲ್ಲಿದೆ ಎಂದು ಟೀಕಿಸಿದರು.
ಅಡಿಕೆ ಆರೋಗ್ಯಕರ ಎಂಬ ಆಲೋಚನೆ ಇತ್ತು. ಹೀಗಾಗಿ ರಾಮಯ್ಯ ವಿಶ್ವವಿದ್ಯಾಲಯಕ್ಕೆ ಒಂದು ವರ್ಷದ ಹಿಂದೆ ಇದರ ಕುರಿತು ಸಂಶೋಧನೆ ಮಾಡಲು ತಿಳಿಸಿದ್ದೆವು. ಅಡಿಕೆ ಕಾರ್ಯಪಡೆಯಿಂದ ಜವಾಬ್ದಾರಿ ನೀಡಲಾಗಿತ್ತು. ಸಂಶೋಧನೆ ನಡೆಸಿದ ವಿಶ್ವವಿದ್ಯಾಲಯದಿಂದ ಪ್ರಾಥಮಿಕ ವರದಿ ಬಂದಿದೆ. ವರದಿ ಕುರಿತು ಚರ್ಚೆ ಮಾಡಿದ್ದೇವೆ. ಸಂತೋಷಕರ ವಿಷಯ ಎಂದರೆ ಅಡಿಕೆ ಹಾನಿಕಾರಕ ಅಲ್ಲ ಎಂಬುದು ವರದಿಯಿಂದ ತಿಳಿದು ಬಂದಿದೆ.
ಅಡಿಕೆಯಲ್ಲಿ ವೈದ್ಯಕೀಯ ಲಕ್ಷಣಗಳು ಇವೆ ಎಂದು ವರದಿಯಲ್ಲಿ ಹೇಳಿದ್ದಾರೆ. ಹಾಗಾಗಿ ಅಡಿಕೆ ಬಗ್ಗೆ ಇನ್ನೊಂದು ಪೂರ್ಣವಾದ ವರದಿ ಕೊಡ್ತಾರೆ. ಅಧಿಕ ರಕ್ತದೊತ್ತಡ ನಿಯಂತ್ರಣ, ಡಯಾಬಿಟಿಸ್, ಹೊಟ್ಟೆ ನೋವಿಗೆ ಅಡಿಕೆ ಔಷಧ ಆಗ್ತಾ ಇದೆ. ಗಾಯ ಗುಣಪಡಿಸಲು ಅಡಿಕೆ ಉತ್ತಮವಾಗಿರುವಂತೆ ಫಲಿತಾಂಶ ನೀಡಿದೆ. ಅದೇ ರೀತಿ ಎಲೆ ಚುಕ್ಕಿ ರೋಗಕ್ಕೆ ಸಂಶೋಧನೆಗೆ ಶಿವಮೊಗ್ಗ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡುವ ಬಗ್ಗೆ ತೀರ್ಮಾನ ಮಾಡಿದ್ದೇವೆ ಎಂದರು.
ವಿಕಾಸಸೌಧದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ರಾಜ್ಯ ಅಡಿಕೆ ಟಾಸ್ಕ್ ಫೋರ್ಸ್ನ ಮಹತ್ವದ ಸಭೆ ನಡೆಸಿದರು. ರಾಜ್ಯದಲ್ಲಿ ಅಡಿಕೆ ಬೆಳೆ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳು, ಅಡಿಕೆ ಮಾರುಕಟ್ಟೆ ಎದುರಿಸುತ್ತಿರುವ ಸ್ಥಿತ್ಯಂತರಗಳು ಹಾಗೂ ಇನ್ನಿತರ ಸಂಬಂಧಿತ ವಿಷಯಗಳ ಕುರಿತು ಚರ್ಚಿಸಲಾಯಿತು. ರಾಜ್ಯ ತೋಟಗಾರಿಕಾ ವಿಶ್ವ ವಿದ್ಯಾಲಯದ ಉಪ ಕುಲಪತಿ ಆರ್. ಸಿ. ಜಗದೀಶ್ ಹಾಗೂ ರಾಜ್ಯ ಅಡಿಕೆ ಕಾರ್ಯಪಡೆಯ ರಾಜ್ಯ ಮಂಡಳಿಯ ಹಿರಿಯ ಸದಸ್ಯರು ಸೇರಿದಂತೆ, ರಾಜ್ಯ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರು ಸಭೆಯಲ್ಲಿ ಭಾಗವಹಿಸಿದ್ದರು.
ವಿಧಾನಸಭೆಯಲ್ಲೂ ಪ್ರಸ್ತಾಪ: ಪ್ರತಿಪಕ್ಷ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಅಡಿಕೆ ಎಲೆ ಚುಕ್ಕಿ ರೋಗದ ಬಗ್ಗೆ ಪ್ರಸ್ತಾಪಿಸಿದರು. ಅಡಿಕೆಗೆ ಬಂದ ರೋಗ ವಾಸಿ ಮಾಡಿಲ್ಲ. ಅಡಿಕೆ ಭೂತಾನ್ ನಿಂದ ಆಮದು ಮಾಡ್ಕೋತಿದ್ದಾರೆ. ಇಲ್ಲಿ ಯಾರೂ ಕೊಂಡ್ಕೋತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಆರಗ ಜ್ಞಾನೇಂದ್ರ, ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದೇವೆ. ಭೂತಾನ್ ನಿಂದ ಒಂದು ಕಾಳು ಅಡಿಕೆ ಕೂಡ ಬಂದಿಲ್ಲ ಎಂದರು. ಆಗ ಸಿದ್ದರಾಮಯ್ಯ ಅವರು ನೀವೇ ಹೇಳಿದ್ದೀರಿ ಬಂದಿದೆ ಅಂತಾ. ಮೊದಲು ಎಷ್ಟಿತ್ತು ಅಡಕೆ ರೇಟ್? ಈಗ ಎಷ್ಟಿದೆ? ಅಡಿಕೆ ರೇಟ್ ಯಾಕೆ ಕಡಿಮೆ ಆಯ್ತು? ಎಂದು ಟೀಕಿಸಿದರು.
ಇದನ್ನೂ ಓದಿ: ಕರ್ನಾಟಕವೇ ಮಾಡೆಲ್, ನಮಗೆ ಯುಪಿ, ಗುಜರಾತ್ ಮಾಡೆಲ್ ಬೇಕಿಲ್ಲ, ರಾಜ್ಯಪಾಲರಿಂದ ಸರ್ಕಾರ ಬರೀ ಸುಳ್ಳು ಹೇಳಿಸಿದೆ: ಹರಿಪ್ರಸಾದ್