ಬೆಂಗಳೂರು: ಕೊರೊನಾ ಹಾವಳಿಯಿಂದ ಸ್ಥಗಿತಗೊಂಡಿದ್ದ ಆಫ್ಲೈನ್ ಶೈಕ್ಷಣಿಕ ವ್ಯವಸ್ಥೆಗೆ ಮರುಚಾಲನೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ದೀಪಾವಳಿ ನಂತರ ಎಲ್ಲಾ ಮಾದರಿಯ ಪದವಿ ತರಗತಿಗಳನ್ನು ಆಫ್ಲೈನ್ನಲ್ಲಿ ನಡೆಸಲು ಗ್ರೀನ್ ಸಿಗ್ನಲ್ ನೀಡಿದ್ದು, ನವೆಂಬರ್ 17ರಿಂದ ಕಾಲೇಜುಗಳು ಆರಂಭಗೊಳ್ಳಲಿವೆ. ಪದವಿ ತರಗತಿಗಳ ಆರಂಭಕ್ಕೆ ಯುಜಿಸಿ ಅನುಮತಿ ನೀಡಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪದವಿ ಕಾಲೇಜುಗಳ ಆರಂಭ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿಂದು ಸಭೆ ನಡೆಸಲಾಯಿತು. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ನೇತೃತ್ವದ ಸಮಿತಿ ಸಿದ್ಧಪಡಿಸಿದ್ದ ಯೋಜನೆಯನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು. ಸಿದ್ಧತಾ ಕಾರ್ಯದ ವ್ಯವಸ್ಥೆಗೆ ತೃಪ್ತಿಗೊಂಡ ಸಿಎಂ ಪದವಿ ಕಾಲೇಜುಗಳ ಪುನರಾರಂಭಕ್ಕೆ ಸಮ್ಮತಿ ನೀಡಿದರು.
ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅಶ್ವತ್ಥ್ ನಾರಾಯಣ, ನವೆಂಬರ್ 17 ರಂದು ರಾಜ್ಯದಲ್ಲಿ ಪದವಿ ಕಾಲೇಜು ಆರಂಭಗೊಳ್ಳಲಿವೆ. ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್ ಕಾಲೇಜುಗಳು ಆಫ್ಲೈನ್ನಲ್ಲಿ ಆರಂಭಿಸಲಾಗುತ್ತಿದೆ. ಆದರೆ ಕಾಲೇಜಿಗೆ ಹಾಜರಾಗುವುದು ವಿದ್ಯಾರ್ಥಿಗಳ ವಿವೇಚನೆಗೆ ಬಿಡಲಾಗಿದೆ. ಆನ್ಲೈನ್ ಮತ್ತು ಆಫ್ಲೈನ್ ಎರಡೂ ಮಾದರಿಯಲ್ಲಿ ತರಗತಿಗಳು ನಡೆಯಲಿವೆ, ಯಾವ ಮಾದರಿಯಲ್ಲಿ ಹಾಜರಾಗಬೇಕು ಎಂಬುದನ್ನು ವಿದ್ಯಾರ್ಥಿಗಳು ನಿರ್ಧರಿಸಬೇಕು. ಆದರೆ ಪ್ರಾಯೋಗಿಕ ತರಗತಿಗಳಿಗೆ ಮಾತ್ರ ವಿದ್ಯಾರ್ಥಿಗಳು ಹಾಜರಾಗಬೇಕಾಗಲಿದೆ ಎಂದರು.
ಪ್ರತಿ ಕಾಲೇಜಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಕಾರ್ಯಪಡೆ ರಚಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಇರಲಿದೆ. ಕಾಲೇಜುಗಳು, ಹಾಸ್ಟೆಲ್ಗಳಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಆರೋಗ್ಯದಲ್ಲಿ ಏರುಪೇರಾದರೆ ಸರ್ಕಾರವೇ ಅವರಿಗೆ ಚಿಕಿತ್ಸೆ ಕೊಡಿಸಲಿದೆ ಎಂದರು.
ಪೋಷಕರ ಒತ್ತಾಯವೂ ಕಾಲೇಜು ಆರಂಭಿಸಬೇಕು ಎನ್ನುವುದೇ ಆಗಿದೆ. ಹಾಗಾಗಿ ನಾವು ಆರಂಭಿಕವಾಗಿ ಪದವಿ ಕಾಲೇಜು ಆರಂಭ ಮಾಡುತ್ತಿದ್ದೇವೆ. ಈ ಸಂಬಂಧ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು. ಕೊರೊನಾ ರೋಗಕ್ಕೆ ಉಚಿತವಾಗಿ ಔಷಧ ನೀಡುವ ಬಗ್ಗೆ ನೆರೆ ರಾಜ್ಯಗಳು ಹೇಳಿಕೆ ನೀಡುತ್ತಿರುವ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಡಿಸಿಎಂ ಈ ಬಗ್ಗೆ ಸಿಎಂ ನಿರ್ಧರಿಸಲಿದ್ದಾರೆ ಎಂದು ತಿಳಿಸಿದರು.