ಬೆಂಗಳೂರು: ರಾಜ್ಯದಲ್ಲಿ ಪಕ್ಷಾಂತರ ಅತಿಯಾಗಿದ್ದು, ಪಕ್ಷಾಂತರಿಗಳ ಸದಸ್ಯತ್ವ ಕೂಡಲೇ ರದ್ದುಗೊಳಿಸಬೇಕೆಂದು ಒತ್ತಾಯಿಸಿ ವಾಟಾಳ್ ನಾಗರಾಜ್ ರಾಜಭವನದ ಮುಂದೆ ಪ್ರತಿಭಟನೆ ನಡೆಸಿದರು.
ನಗರದ ರಾಜಭವನದ ಮುಂದೆ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್, ಕರ್ನಾಟಕದಲ್ಲಿ ಪಕ್ಷಾಂತರ ಹಾವಳಿ ಅತಿಯಾಗಿದೆ. ಪಕ್ಷಾಂತರಿಗಳ ಸದಸ್ಯತ್ವ ಕೂಡಲೇ ರದ್ದಾಗಬೇಕು. ಸುಮಾರು 15 ವರ್ಷಗಳಿಂದ ಶಾಸಕರನ್ನು ಖರೀದಿ ಮಾಡುವುದು, ಶಾಸಕರ ಕೈಯಲ್ಲಿ ರಾಜೀನಾಮೆ ಕೊಡಿಸುವುದು, ಮತ್ತೆ ಚುನಾವಣೆಗೆ ನಿಲ್ಲಿಸುವುದು, ಲಂಗು ಲಗಾಮಿಲ್ಲದೆ “ಆಪರೇಷನ್" ಎಂಬ ಹೆಸರಿನಿಂದ ಸಾಗಿದೆ. ಆಪರೇಷನ್ ಅಂದ್ರೆ ಭಾರಿ ತ್ಯಾಗ ಎಂದು ತಿಳಿದುಕೊಂಡಿದ್ದಾರೆ ಅಂತ ಅಕ್ರೋಶ ಹೊರಹಾಕಿದರು.
ಒಂದು ಪಕ್ಷದಿಂದ ಚುನಾಯಿತರಾಗಿ ಗೆದ್ದ ಪಕ್ಕವನ್ನೇ ವಿರೋಧ ಮಾಡುವುದು ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡು. ಪಕ್ಷಾಂತರ ಒಂದು ದಂಧೆಯಾಗಿದ್ದು, 30,40,50 ಕೋಟಿಗೆ ಎಮ್ಮೆಗಳ ವ್ಯಾಪಾರದಂತಾಗಿದೆ. ಇದು ಸಂವಿಧಾನಕ್ಕೆ ಮತ್ತು ಮತದಾರರಿಗೆ ಅಪಚಾರ ಮಾಡಿದಂತೆ ಇದರಿಂದ ರಾಜ್ಯದ ಆಡಳಿತ ಕುಸಿದು ಬೀಳುತ್ತದೆ. ಅದಕ್ಕಾಗಿ ಪಕ್ಷಾಂತರ ಕಾಯ್ದೆ ತಿದ್ದುಪಡಿಯಾಬೇಕು. ಪಕ್ಷಾಂತರಿಗಳು ಜೀವನ ಪರ್ಯಂತ ಚುನಾವಣೆಗೆ ನಿಲ್ಲಬಾರದು. ಅವರನ್ನ ಜೈಲಿಗೆ ಹಾಕಬೇಕೆಂದು ಒತ್ತಾಯಿಸಿದರು.
ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ವಾಟಾಳ್ ನೇತೃತ್ವದ ತಂಡವನ್ನ ಪೊಲೀಸರು ಬಂಧಿಸಿದರು.