ಬೆಂಗಳೂರು: ಹಿಂದೂಗಳ ಸಾಮೂಹಿಕ ವಿವಾಹ ಯೋಜನೆಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ಈ ಬಗ್ಗೆ ವಿಧಾನಸೌಧದಲ್ಲಿ ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು, ಮುಂದಿನ ವರ್ಷದಿಂದ ಸಾಮೂಹಿಕ ಮದುವೆ ಸರ್ಕಾರದಿಂದ ಮಾಡಲು ನಿರ್ಧರಿಸಿದ್ದೇವೆ. ಎ ದರ್ಜೆಯ 90 ರಿಂದ 100 ದೇವಾಲಯಗಳಲ್ಲಿ ಸಾಮೂಹಿಕ ಮದುವೆ ನೆರವೇರಲಿದೆ. ಮೊದಲ ಸಾಮೂಹಿಕ ಮದುವೆ ಸಮಾರಂಭವನ್ನು ಏಪ್ರಿಲ್ 26 ಮತ್ತು ಮೇ 24 ರಂದು ಮಾಡಲು ನಿರ್ಧರಿಸಲಾಗಿದೆ.
ಸಾಮೂಹಿಕ ಮದುವೆಯ ಷರತ್ತುಗಳೇನು?
- 30 ದಿನಗಳ ಮೊದಲು ನೋಂದಣಿ ಮಾಡಿಕೊಳ್ಳಬೇಕು
- ವಧು-ವರರ ಪೋಷಕರು ಮದುವೆಯಲ್ಲಿ ಭಾಗವಹಿಸಬೇಕು
- ಪೋಷಕರು ವಧು-ವರರ ದಾಖಲೆ ಕೊಡಬೇಕು.
- ಎರಡನೇ ಮದುವೆಗೆ ಅವಕಾಶ ಇಲ್ಲ
- ವರನಿಗೆ 21, ವಧುವಿಗೆ 18 ವರ್ಷ ಆಗಿರಬೇಕು
- ಸ್ಥಳದಲ್ಲಿ ನೋಂದಣಿ ಪ್ರಕ್ರಿಯೆ ನಡೆಯುತ್ತದೆ
- ವಧು ವರರ ಬಗ್ಗೆ ದೂರು ಬಂದಲ್ಲಿ ಪುನರ್ ಪರಿಶೀಲನೆ
ಪ್ರೋತ್ಸಾಹ ಧನದ ವಿವರ:
40 ಸಾವಿರ ರೂ. ವೆಚ್ಚದ 8 ಗ್ರಾಂ ಚಿನ್ನದ ತಾಳಿಯನ್ನು ಮತ್ತು ಸೀರೆಗಾಗಿ 10,000 ಹಣವನ್ನು ವಧುವಿಗೆ ಹಾಗೂ ವಸ್ತ್ರಕ್ಕಾಗಿ 5,000 ರು. ವರನಿಗೆ ನೀಡಲಾಗುತ್ತದೆ. ವಧು ವರರ ಬ್ಯಾಂಕ್ ಖಾತೆಗೆ ಈ ಹಣವನ್ನು ಜಮಾ ಮಾಡಲಾಗುತ್ತದೆ.
ಪ್ರತಿ ಜೋಡಿಗೆ 55 ಸಾವಿರ ರೂ. ಖರ್ಚು ಮಾಡಿ ಮದುವೆ ಮಾಡಲು ಸರ್ಕಾರ ನಿರ್ಧರಿಸಲಾಗಿದ್ದು, ಶಿಶು ಕಲ್ಯಾಣ ಇಲಾಖೆಯಿಂದ 10,000 ರೂ. ಬಾಂಡ್ ನೀಡಲಾಗುತ್ತದೆ. ಕೊಲ್ಲೂರು ಮೂಕಾಂಬಿಕೆ, ಬನಶಂಕರಿ ದೇವಾಲಯ, ಮೈಸೂರು ಚಾಮುಂಡಿ, ಕುಕ್ಕೆ ಸುಬ್ರಮಣ್ಯ ಸೇರಿದಂತೆ ಎ ದರ್ಜೆಯ ದೇವಾಲಯಗಳಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ.