ಬೆಂಗಳೂರು: ರಾಜ್ಯದ ಬಹುತೇಕ ಕಡೆ ಭತ್ತವನ್ನು ಬೆಳೆಯಲಾಗುತ್ತದೆ. ಅದರಲ್ಲಿಯೂ ಕೃಷ್ಣಾ, ತುಂಗಭದ್ರಾ, ಕಾವೇರಿ ನದಿ ಕಣಿವೆ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಭತ್ತದ ಉತ್ಪಾದನೆ ಹೆಚ್ಚು. ರಾಯಚೂರು ಜಿಲ್ಲೆಯು ಭತ್ತದ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಬಳ್ಳಾರಿ, ಮಂಡ್ಯ, ಮೈಸೂರು, ದಾವಣಗೆರೆ, ಶಿವಮೊಗ್ಗ, ಕೊಪ್ಪಳ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಪ್ರಮುಖವಾಗಿ ಭತ್ತವನ್ನು ಬೆಳೆಯಲಾಗುತ್ತದೆ.
ಪ್ರತಿ ಕ್ವಿಂಟಾಲ್‌ಗೆ ಸಾಮಾನ್ಯ ಭತ್ತಕ್ಕೆ ಕೇಂದ್ರ ಸರಕಾರ ನಿಗದಿ ಮಾಡಿರುವ 1,868 ರೂ. ಹಾಗೂ ಗ್ರೇಡ್-1 ಭತ್ತಕ್ಕೆ 1,888 ರೂ. ನೀಡಲಾಗುತ್ತದೆ. ಜೊತೆಗೆ ರಾಜ್ಯ ಸರಕಾರದಿಂದ ಪ್ರೋತ್ಸಾಹ ಧನ ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದ್ದು, ಪ್ರತಿ ರೈತರಿಂದ ಎಕರೆಗೆ 16 ಕ್ವಿಂಟಾಲ್‌ನಂತೆ ಗರಿಷ್ಠ 40 ಕ್ವಿಂಟಾಲ್ ಭತ್ತ ಖರೀದಿ ಮಾಡಲಾಗುತ್ತದೆ.
ಕೇಂದ್ರ ಆಹಾರ ನಿಗಮದ ಮೂಲಕ ರೈತರ ಭತ್ತವನ್ನು ಖರೀದಿಸಲು ಕೇಂದ್ರಗಳನ್ನು ತೆರೆಯಲಾಗಿದ್ದು, ರೈತರಿಂದ ಖರೀದಿ ಮಾಡಿದ ಭತ್ತವನ್ನು ನೇರವಾಗಿ ಈಗಾಗಲೇ ಗುರುತಿಸಲಾದ ಅಕ್ಕಿ ಗಿರಣಿಗಳಿಗೆ ಸರಬರಾಜು ಮಾಡಲಾಗುತ್ತದೆ.
ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ಸುಮಾರು 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಈ ಬಾರಿ ಬೆಳೆಯಲಾಗಿದೆ. ಭತ್ತ ಬೆಳೆಯುವ ಶೇ. 90 ರಷ್ಟು ರೈತರು ಭತ್ತವನ್ನು ಸಂಗ್ರಹಿಸಿಟ್ಟುಕೊಳ್ಳುವುದಿಲ್ಲ. ಒಂದಿಷ್ಟು ಆರ್ಥಿಕವಾಗಿ ಸದೃಢವಾಗಿರುವ ರೈತರು ತಮ್ಮ ಸ್ವಂತ ಗೋದಾಮಿನಲ್ಲಿಯೋ ಅಥವಾ ಖಾಸಗಿ ಗೋದಾಮಿನಲ್ಲಿಯೋ ಸಂಗ್ರಹಿಸುತ್ತಾರೆ. ಹೆಚ್ಚಾಗಿ ಭತ್ತ ಕಟಾವು ಮಾಡಿದ ಕೂಡಲೇ ರೈತರು ಮಾರಾಟ ಮಾಡುತ್ತಾರೆ.
ಇನ್ನು ರಾಯಚೂರು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 3.17 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಭತ್ತವನ್ನ ಬೆಳೆಯುವ ಗುರಿ ಹೊಂದಿದ್ದು, ಇದರಲ್ಲಿ 49,754 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಭತ್ತವನ್ನ ಹೆಚ್ಚಾಗಿ ಬೆಳೆಯುವುದರಿಂದ 6 ಲಕ್ಷ ಮೆಟ್ರಿಕ್ ಟನ್ವರೆಗೆ ಭತ್ತವನ್ನ ಉತ್ಪಾದಿಸಲಾಗುತ್ತದೆ. ಹೀಗೆ ಭತ್ತ ಬೆಳೆಯುವ ರೈತರು ಭತ್ತವನ್ನ ಸಂಗ್ರಹಿಸುವುದು ಕಡಿಮೆ. ಯಾವಾಗ ಫಸಲು ಬರುತ್ತದೆ ನೇರವಾಗಿ ಎಪಿಎಂಸಿ ಮಾರುಕಟ್ಟೆ ಇಲ್ಲವೆ ರೈಸ್ ಮೀಲ್ಗಳಿಗೆ ಮಾರಾಟ ಮಾಡುತ್ತಾರೆ.
ಭತ್ತದ ಬೆಂಬಲ ಬೆಲೆ ಖರೀದಿಯನ್ನು ಪ್ರಾರಂಭಿಸಲು ರೈತರ ನೋಂದಣಿಯ ಬಳಿಕ, ಖರೀದಿ ಕೇಂದ್ರ ತೆರೆಯಲು ಸರ್ಕಾರ ಸೂಚನೆ ನೀಡುತ್ತದೆ. ಆದರೆ ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲಿ ಹೆಚ್ಚಿನ ದರವಿರುವಾಗ ಮಾರುಕಟ್ಟೆಗೆ ರೈತರು ಭತ್ತವನ್ನ ಮಾರಾಟ ಮಾಡುತ್ತಾರೆ.