ಬೆಂಗಳೂರು: ಕೋವಿಡ್-19 ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಂಡು ಅಧಿವೇಶನ ನಡೆಸುವುದು ಅನಿವಾರ್ಯವಿದ್ದು, ಸದ್ಯ ವಿಧಾನಸೌಧದಲ್ಲೇ ಅಧಿವೇಶನ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಂಡು ಅಧಿವೇಶನ ನಡೆಸುವುದು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ. ವಿಧಾನಸಭೆ ಸಭಾಂಗಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಅಧಿವೇಶನ ನಡೆಸುವುದು ಕಷ್ಟಸಾಧ್ಯ ಎಂಬ ಆತಂಕ ವಿಧಾನಸಭೆ ಸಚಿವಾಲಯದ ಅಧಿಕಾರಿಗಳದ್ದಾಗಿತ್ತು. ಅದಕ್ಕಾಗಿ ವಿಧಾನಸೌಧದ ಹೊರಗಡೆ ದೊಡ್ಡ ಹಾಲ್ನಲ್ಲಿ ಅಧಿವೇಶನ ನಡೆಸುವ ಬಗ್ಗೆಯೂ ಚಿಂತನೆ ನಡೆಸಿದ್ದರು.
ಈ ನಿಟ್ಟಿನಲ್ಲಿ ಜಿಕೆವಿಕೆ ಆಡಿಟೋರಿಯಂ, ಅರಮನೆ ಮೈದಾನ ಸೇರಿ ಕೆಲವೆಡೆ ಭೇಟಿ ನೀಡಿ, ಅಧಿವೇಶನ ನಡೆಸುವ ಸಾಧ್ಯ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸಿದ್ದರು. ಈ ಸಂಬಂಧ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕಾರಿಗಳ ಜೊತೆ ಸಭೆಯನ್ನೂ ನಡೆಸಿದ್ದಾರೆ. ಸೆ. 3ನೇ ವಾರ ಅಧಿವೇಶನ ನಡೆಯುವ ಸಾಧ್ಯತೆಯಿದ್ದು, ಒಟ್ಟು 10 ದಿನ ಕಲಾಪ ನಡೆಸುವ ಚಿಂತನೆಯಿದೆ. ಅಧಿವೇಶನ ಸಂಬಂಧ ಕೈಗೊಂಡಿರುವ ಸಿದ್ಧತೆ ಕುರಿತು ಈಗಾಗಲೇ ಸಿಎಂಗೆ ಸ್ಪೀಕರ್ ಪತ್ರ ಬರೆದು ಮಾಹಿತಿ ನೀಡಿದ್ದಾರೆ.
ಕಲಾಪ ನಡೆಸಲು ವಿಧಾನಸೌಧದವೇ ಫೈನಲ್: ಎಲ್ಲಾ ಸಾಧಕ-ಬಾಧಕಗಳ ಚರ್ಚೆ ನಂತರ ವಿಧಾನಸೌಧದಲ್ಲೇ ಅಧಿವೇಶನ ನಡೆಸಲು ಸ್ಪೀಕರ್ ಹಾಗೂ ಅಧಿಕಾರಿಗಳು ನಿರ್ಧರಿಸಿದ್ದಾರೆ. ಗುರುವಾರ ಮತ್ತೆ ಸ್ಪೀಕರ್ ಕಾಗೇರಿ ವಿಧಾನಸಭೆ ಸಚಿವಾಲಯದ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಧಿವೇಶನ ನಡೆಸುವ ರೀತಿ, ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಬೇರೆಡೆ ಅಧಿವೇಶನ ನಡೆಸಿದರೆ ಆರ್ಥಿಕ ಹೊರೆಯೂ ಜಾಸ್ತಿಯಾಗಲಿದೆ. ಜೊತೆಗೆ ಕಡತಗಳನ್ನು ಸ್ಥಳಾಂತರಿಸುವುದು, ಕಲಾಪ ನಡೆಸಲು ಬೇಕಾಗಿರುವ ಮೂಲ ಸೌಕರ್ಯ ಒದಗಿಸುವುದು ಸವಾಲಿನ ವಿಚಾರವಾಗಿದೆ. ಈ ಹಿನ್ನೆಲೆ ವಿಧಾನಸೌಧದಲ್ಲೇ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡು ಅಧಿವೇಶನ ನಡೆಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಸ್ಪೀಕರ್ ಹಾಗೂ ಅಧಿಕಾರಿಗಳು ಬಂದಿದ್ದಾರೆ.
ಏನೆಲ್ಲಾ ಮುಂಜಾಗ್ರತಾ ಕ್ರಮ?: ವಿಧಾನಸಭೆಯಲ್ಲಿ 60 ವರ್ಷ ಮೇಲ್ಪಟ್ಟ 90 ಶಾಸಕರ ಪಟ್ಟಿಯನ್ನೂ ವಿಧಾನಸಭೆ ಸಚಿವಾಲಯ ಅಧಿಕಾರಿಗಳು ತರಿಸಿಕೊಂಡಿದ್ದಾರೆ. ಇವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ತೀರ್ಮಾನಿಸಲಾಗಿದೆ. ಈ ಬಾರಿ ಪ್ರೇಕ್ಷಕರ ಗ್ಯಾಲರಿಗೆ ಸಾರ್ವಜನಿಕರ ಪ್ರವೇಶ ಸಂಪೂರ್ಣ ನಿಷೇಧಿಸಲಾಗುತ್ತದೆ. ವಿಧಾನಸಭೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಎಲ್ಲಾ ಸಿದ್ಧತೆ ನಡೆಸಲಾಗುತ್ತಿದೆ. ಎರಡು ಕುರ್ಚಿಗಳ ಮಧ್ಯೆ ಪ್ಲ್ಯಾಸ್ಟಿಕ್ ಮೆಷ್ ಅಳವಡಿಕೆ, ಕಡ್ಡಾಯ ಮಾಸ್ಕ್, ಹೆಡ್ ಮಾಸ್ಕ್ ಮತ್ತು ಗ್ಲೌಸ್ ಧರಿಸುವಂತೆ ಶಾಸಕರಿಗೆ ಸೂಚನೆ ನೀಡಲು ನಿರ್ಧರಿಸಲಾಗಿದೆ.
ಸಚಿವರು ಹಾಗೂ ಶಾಸಕರ ಪಿಎ, ಪಿಎಸ್, ಗನ್ ಮ್ಯಾನ್ ಮತ್ತು ಹಿಂಬಾಲಕರಿಗೆ ಅಧಿವೇಶನ ಆವರಣಕ್ಕೆ ಪ್ರವೇಶ ನಿಷೇಧಿಸಲು ಯೋಚಿಸಲಾಗಿದೆ. ಕೇವಲ ಅಧಿಕಾರಿಗಳು ಮತ್ತು ಪತ್ರಕರ್ತರಿಗೆ ಮಾತ್ರ ಪ್ರವೇಶ ನೀಡಲು ನಿರ್ಧರಿಸಲಾಗಿದೆ. ಕಲಾಪ ನಡೆಯುವ ಸಭಾಂಗಣದಲ್ಲಿ ಪ್ರತಿನಿತ್ಯ ಸ್ಯಾನಿಟೈಸಿಂಗ್ ಮಾಡಲು, ಶಾಸಕರು, ಅಧಿಕಾರಿಗಳ ಥರ್ಮಲ್ ಸ್ಕ್ರೀನಿಂಗ್ ಮಾಡಲು ನಿರ್ಧರಿಸಲಾಗಿದೆ.