ಬೆಂಗಳೂರು : ಸಂಚಾರ ನಿಯಮ ಉಲ್ಲಂಘನೆಗಾಗಿ ವಾಹನ ಸವಾರರಿಗೆ ವಿಧಿಸಲಾಗಿದ್ದ ದಂಡ ಮೊತ್ತದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡುವುದನ್ನು 15 ದಿನಗಳ ಕಾಲ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ಧರಿಸಿದೆ. ಮಂಗಳವಾರ ಹೈಕೋರ್ಟ್‌ನ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಹೈಕೋರ್ಟ್ ನ್ಯಾಯಯೂರ್ತಿ ಬಿ.ವೀರಪ್ಪ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಸಾರಿಗೆ ಮತ್ತು ಪೊಲೀಸ್ ಇಲಾಖೆಯ ಉನ್ನತ ಶ್ರೇಣಿಯ ಅಧಿಕಾರಿಗಳ ಸಭೆಯಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ನಗರದ ವಿಶೇಷ ಪೊಲೀಸ್ ಆಯುಕ್ತ (ಸಂಚಾರ) ಡಾ.ಎಂ.ಎ ಸಲೀಂ ಅವರು, ಟ್ರಾಫಿಕ್ ಫೈನ್ ಪಾವತಿ ಮೊತ್ತದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡುವುದನ್ನು 15 ಕಾಲ ವಿಸ್ತರಿಸಬೇಕು. ಈ ಕುರಿತು ಸಾರ್ವಜನಿಕರ ಬೇಡಿಕೆಯಿದೆ ಎಂದು ಸಭೆಯಲ್ಲಿ ಮನವಿ ಮಾಡಿದರು. ವಿಶೇಷ ಆಯುಕ್ತರ ಮತ್ತು ಸಾರ್ವಜನಿಕರ ಬೇಡಿಕೆಯನ್ನು ಪರಿಗಣಿಸಿದರು. ಈ ವೇಳೆ ಟ್ರಾಫಿಕ್ ಫೈನ್ ಪ್ರಕರಣದಲ್ಲಿ ಶೇ.50ರಷ್ಟು ರಿಯಾಯಿತಿ ನೀಡುವುದನ್ನು 15 ದಿನಗಳ ಕಾಲ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ಕಾನೂನು ಸೇವೆಗಳ ಪ್ರಾಧಿಕಾರ ತೀರ್ಮಾನಿಸಿತು.
2 ಕೋಟಿ ಪ್ರಕರಣ-1300 ಕೋಟಿ ದಂಡ ಬಾಕಿ : ನ್ಯಾಯಮೂರ್ತಿ ಬಿ. ವೀರಪ್ಪ ಅವರು 2023ರ ಜ.27ರಂದು ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಟ್ರಾಫಿಕ್ ಫೈನ್ ಪಾವತಿಗೆ ವಿನಾಯಿತಿ ನೀಡುವಂತೆ ಸಲಹೆ ನೀಡಿದ್ದರು. ಅದರಂತೆ ಸಾರಿಗೆ ಇಲಾಖೆಯು ಫೆ.3ರಿಂದ ಫೆ.11ರವರೆಗೆ ಶೇ.50 ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿತ್ತು. ಇದರಿಂದ ಫೆ.3ರಿಂದ ಫೆ.11ವರೆಗೆ ಒಟ್ಟು 52.11 ಲಕ್ಷ ಪ್ರಕರಣಗಳನ್ನು ಇತ್ಯರ್ಥ ಪಡಿಸಿ, 152 ಕೋಟಿ ರೂ. ದಂಡ ಸಂಗ್ರಹಿಸಲಾಗಿತ್ತು.
ರಾಜ್ಯದಲ್ಲಿ ಇನ್ನೂ 2 ಕೋಟಿ ಟ್ರಾಫಿಕ್ ದಂಡ ಪ್ರಕರಣಗಳಿದ್ದು, ಸುಮಾರು 1300 ಕೋಟಿ ರೂ. ದಂಡದ ಮೊತ್ತ ಸಂಗ್ರಹಗೊಳ್ಳಬೇಕಿದೆ. ಇದರಿಂದ ಶೇ.50ರಷ್ಟು ರಿಯಾಯಿತಿ ನೀಡುವುದನ್ನು ಎರಡು ವಾರ ಕಾಲ ವಿಸ್ತರಿಸಲು ಕೋರಿ ವಿಶೇಷ ಆಯುಕ್ತರಾದ (ಸಂಚಾರ ವಿಭಾಗ) ಡಾ.ಸಲೀಂ ಅವರು ಕಾನೂನು ಸೇವಾ ಪ್ರಾಧಿಕಾರಕ್ಕೆ ಪತ್ರ ಬರೆದು ಕೋರಿದ್ದರು. ಈ ಹಿನ್ನೆಲೆಯಲ್ಲಿ ನ್ಯಾ.ಬಿ. ವೀರಪ್ಪ ಅವರ ಅಧ್ಯಕ್ಷೆಯಲ್ಲಿ ಮಂಗಳವಾರ ಸಭೆ ನಡೆಸಲಾಯಿತು.
ಮೈಸೂರು ನಗರದ ವ್ಯಾಪ್ತಿ: ಇನ್ನು, ಈ ವ್ಯಾಪ್ತಿಯಲ್ಲೂ ಫೆ.3 ರಿಂದ 11 ರ ವರೆಗೆ, ಸಂಚಾರಿ ನಿಯಮಗಳ ಪ್ರಕರಣದ ದಂಡ ಪಾವತಿಗೆ ಶೆ.50 ರಷ್ಟು ರಿಯಾಯಿತಿ ಘೋಷಣೆ ಮಾಡಲಾಗಿತ್ತು. ಇದರನ್ವಯ ಈ ಅವಧಿಯಲ್ಲಿ ಒಟ್ಟು 4,98,265 ಸಂಚಾರಿ ನಿಯಮ ಉಲ್ಲಂಘನಾ ಪ್ರಕರಣಗಳಲ್ಲಿ ಒಟ್ಟು 12,30,58,650 ರೂಪಾಯಿ ದಂಡ ವಸೂಲಿ ಆಗಿದೆ. ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೊತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೌಡಿ ಶೀಟರ್ ಗಳ ಪರೇಡ್ : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ, ಮಂಗಳವಾರ ಮೈಸೂರು ನಗರದ ರೌಡಿ ಶೀಟರ್ ಗಳ ಪರೇಡ್ ಅನ್ನು ಮೈಸೂರು ನಗರದ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ನಡೆಸಲಾಯಿತು. ಮೈಸೂರು ನಗರದ ವಿವಿಧ ಪೋಲಿಸ್ ಠಾಣೆಯ ಸುಮಾರು 76 ರೌಡಿ ಶೀಟರ್ಗಳು ಈ ಪೆರೆಡ್ನಲ್ಲಿ ಇದ್ದು, ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದು. ಯಾವುದೇ ರೀತಿಯ ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗವಹಿಸದಂತೆ ನಗರ ಪೋಲಿಸ್ ಕಮಿಷನರ್ ರಮೇಶ್ ಬಾನೋತ್ ಎಚ್ಚರಿಕೆ ನೀಡಿದರು.
ಇದರ ಜೊತೆಗೆ ಏನಾದರೂ ಯಾವುದೇ ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿಯಾದರೆ ಮೈಸೂರಿನಿಂದ ಗಡಿಪಾರು ಮಾಡುವುದಾಗಿ ರೌಡಿಶೀಟರ್ ಗಳಿಗೆ ಎಚ್ಚರಿಕೆ ನೀಡಿದರು. ಈ ರೌಡಿ ಶೀಟರ್ ಪೆರೇಡ್ ನಲ್ಲಿ ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
ಇದನ್ನೂ ಓದಿ :ರಸ್ತೆ ನಿಯಮ ಉಲ್ಲಂಘನೆ ಪ್ರಕರಣ, ನಾಡಿದ್ದು ಸಭೆ ಕರೆದ ಕಾನೂನು ಸೇವೆ ಪ್ರಾಧಿಕಾರ.. ಮತ್ತೆ 50 ರಷ್ಟು ದಂಡ ರಿಯಾಯಿತಿ?