ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಸಾಮಾಜಿಕ ನ್ಯಾಯಕ್ಕೆ ದೊಡ್ಡ ಪೆಟ್ಟಾಗುವುದರಿಂದ ಎನ್‌ಇಪಿ ಜಾರಿಯ ನಿರ್ಧಾರವನ್ನು ಕೈಬಿಡಬೇಕು ಎಂದು ಕಾಂಗ್ರೆಸ್ ಹಿರಿಯ ಸದಸ್ಯ ಎಚ್.ಕೆ.ಪಾಟೀಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಣವನ್ನು ಖಾಸಗೀಕರಣಗೊಳಿಸಲು ಎನ್‌ಇಪಿ ಪೂರಕವಾಗಿದೆ. ಬೇರೆ ಯಾವುದೇ ರಾಜ್ಯ ಎನ್‌ಇಪಿ ಜಾರಿಗೆ ಮುಂದಾಗಿಲ್ಲ. ಕರ್ನಾಟಕ ಮಾತ್ರ ಮುಂದಾಗಿದೆ. ಆದರೆ, ಇದು ಸಾಮಾಜಿಕ ನ್ಯಾಯಕ್ಕೆ ದೊಡ್ಡ ಪೆಟ್ಟು ಬೀಳುವುದರಿಂದ ಇದನ್ನು ಹಿಂಪಡೆಯ ಬೇಕು ಎಂದು ಆಗ್ರಹಿಸಿದರು.
ಉದ್ಯೋಗ ವಿಚಾರದಲ್ಲಿ ಹೊರಗುತ್ತಿಗೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದರಿಂದ ಮೀಸಲಾತಿ ಮತ್ತು ಮೆರಿಟ್ ಆಧಾರದ ಮೇಲಿನ ನೇಮಕಾತಿಗೆ ಅಗೌರವ ಸೂಚಿಸಿದಂತಾಗಿದೆ. ಹೊರಗುತ್ತಿಗೆ ನೇಮಕಾತಿಯು ಸರ್ಕಾರದ ವ್ಯವಸ್ಥೆಯನ್ನು ಅಣಕಿಸುವಂತಿದೆ.
ರಾಜ್ಯದ ವಿವಿಧ ಇಲಾಖೆಯಲ್ಲಿ ನಾಲ್ಕುವರೆ ಲಕ್ಷ ಮಂದಿ ಹೊರಗುತ್ತಿಗೆ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಸಂವಿಧಾನದ ಉಲ್ಲಂಘನೆಯಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲೋಕೋಪಯೋಗಿ ಇಲಾಖೆ, ನಗರಾಭಿವೃದ್ಧಿ, ಬಿಬಿಎಂಪಿ ಸೇರಿದಂತೆ ಹಲವು ಇಲಾಖೆಯ ಬಿಲ್ ಬಾಕಿ ಇದ್ದು, ಸುಮಾರು 75 ಸಾವಿರ ಕೋಟಿ ರೂ.ಗಿಂತ ಹೆಚ್ಚು ಬಾಕಿ ಇದೆ. ಅಲ್ಲದೇ, ಕಡತಗಳು ಸಹ ಬಾಕಿ ಉಳಿದಿವೆ. ಬಾಕಿ ಬಿಲ್ ಮತ್ತು ಕಡತಗಳ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಬಜೆಟ್‌ನಲ್ಲಿಯೂ ಪ್ರಸ್ತಾಪ ಮಾಡಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರಿಂದ ಮೇಲ್ವಿಚಾರಕರ ಬಡ್ತಿಗೆ ನಿಯಮ ಸರಳೀಕರಣಕ್ಕೆ ಒತ್ತಾಯ