ಬೆಂಗಳೂರು: ಹಾಲಿನ ದರ 5 ರೂ.ಗೆ ಏರಿಕೆ ಬಗ್ಗೆ ಒಕ್ಕೂಟದವರು ಬೇಡಿಕೆ ಇಟ್ಟಿದ್ದು, ಸರ್ಕಾರ ಇನ್ನೂ ತಿರ್ಮಾನ ಮಾಡಿಲ್ಲ ಎಂದು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು 5 ರೂಪಾಯಿಯಲ್ಲಿ ಶೇ.70ರಷ್ಟು ರೈತರಿಗೆ ಹಾಗೂ ಶೇ.30 ರಷ್ಟು ಒಕ್ಕೂಟಕ್ಕೆ ಸಿಗಲಿದೆ. ಇಂದು ಸಂಜೆ ಸಿಎಂ ಜೊತೆ ಸಭೆ ಇದೆ. ಈ ಬಗ್ಗೆ ಅವರೊಂದಿಗೆ (ಸಿಎಂ) ಚರ್ಚಿಸಿ ತಿರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸಂಜೆ ಕೆಎಂಎಫ್ ಸಭೆ ಕರೆದಿರುವ ಉದ್ದೇಶವೇ ದರ ಹೆಚ್ಚಳ ಬಗ್ಗೆ ಚರ್ಚಿಸಲು. ರೈತರ ಒತ್ತಾಯ ಕೂಡ ಇದೆ. ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಹಾಲು ಉತ್ಪಾದಕರಿಗೂ ಹೆಚ್ಚು ಪ್ರೋತ್ಸಾಹ ಸಿಗಬೇಕು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕೆಎಂಎಫ್ ದರ ಕಡಿಮೆ ಇದೆ. ಈವರೆಗೂ ದರ ಹೆಚ್ಚಳ ಬಗ್ಗೆ ನಿರ್ಧಾರ ಆಗಿಲ್ಲ ಎಂದರು.
ರಾಜ್ಯದ ಎಲ್ಲಾ ಜಿಲ್ಲಾ ಹಾಲು ಒಕ್ಕೂಟಗಳು ನಂದಿನಿ ಹಾಲಿನ ದರವನ್ನು ಲೀಟರ್‌ಗೆ 5 ರೂ. ಹೆಚ್ಚಿಸುವಂತೆ ಹಿಂದೆಯೇ ಬೇಡಿಕೆ ಇಟ್ಟಿದ್ದವು. ಹಾಲಿನ ದರ ಏರಿಕೆಯಲ್ಲಿ ಎರಡು ಅಂಶಗಳಿವೆ. ಖರೀದಿ ದರ ಹಾಗೂ ಮಾರಾಟದ ದರ. ಯಾವುದನ್ನು ಹೆಚ್ಚಿಸಬೇಕು ಎಂಬ ಬಗ್ಗೆ ತೀರ್ಮಾನಿಸಲಿದೆ. ಉತ್ಪಾದಕರಿಗೂ ಅನಾನುಕೂಲ ಆಗದಂತೆ ಹಾಗೂ ಗ್ರಾಹಕರಿಗೂ ಹೊರೆಯಾಗದಂತೆ ಸಾಧಕ–ಬಾಧಕಗಳ ಬಗ್ಗೆ ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.
ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಹಾಲು ಖರೀದಿ ದರ ಹಾಗೂ ಮಾರಾಟ ದರ ರಾಜ್ಯದಲ್ಲಿ ಕಡಿಮೆ ಇದೆ. ಮೇವು, ಫೀಡ್ಸ್ ದರವೂ ಜಾಸ್ತಿಯಾಗಿದೆ. ಇದೆಲ್ಲವನ್ನೂ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ. ಆದರೆ ಈಗಾಗಾಲೇ ಬೆಲೆ ಏರಿಕೆ ಎಂಬ ಆರೋಪಕ್ಕೊಳಗಾಗಿರುವ ಕಾಂಗ್ರೆಸ್ ಸರ್ಕಾರ ಹಾಲಿನ ದರ ಏರಿಕೆ ಮಾಡಿದರೆ ಸಾರ್ವಜನಿಕರು ಹಾಗೂ ಪ್ರತಿಪಕ್ಷಗಳ ಆಕ್ರೋಶಕ್ಕೆ ಗುರಿಯಾಗಲಿದೆ.
ಅಮೂಲ್ ಜೊತೆ ನಂದಿನಿ ವಿಲೀನ ಇಲ್ಲ: ಯಾವುದೇ ಕಾರಣಕ್ಕೂ ಅಮೂಲ್ ಜೊತೆ ನಂದಿನಿ ವಿಲೀನ ಪ್ರಶ್ನೆಯೇ ಇಲ್ಲ. ಆದರೆ, ಹಾಲು ಒಕ್ಕೂಟ ಮತ್ತು ಹಾಲು ಉತ್ಪಾದಕರ ಉಳಿಸುವ ಕಾರಣಕ್ಕೆ ಅನಿವಾರ್ಯವಾಗಿ ಹಾಲಿನ ದರ ಪರಿಷ್ಕರಣೆ ಮಾಡಲೇಬೇಕಿದೆ. ಸಿಎಂ ಜತೆ ಚರ್ಚಿಸಿ ಎಷ್ಟು ಹೆಚ್ಚಳ ಮಾಡಬೇಕು ಎಂದು ನಿರ್ಧರಿಸಲಾಗುತ್ತದೆ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ತಿಳಿಸಿದ್ದರು.
ಜು.11ರಂದು ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 330ರ ಅಡಿ ಅಮೂಲ್ ನಂದಿನಿ ವಿಲೀನ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಜೆಡಿಎಸ್ ಸದಸ್ಯ ಬೋಜೇಗೌಡ, ಅಮೂಲ್ ಅವರು ಬಂದು ಇಲ್ಲಿ ಷಡ್ಯಂತ್ರ ಮಾಡಬಾರದು ಎಂದು ಹಲವು ಸಂಘಗಳು ಪ್ರತಿಭಟನೆ ಮಾಡಿವೆ. ಇದಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದ ಅವರು, ಗೋಹತ್ಯೆ ಕಾಯ್ದೆ ಬಂತು, ನಂತರ ಜಿಲ್ಲೆಗಳಲ್ಲಿ ಗೋ ಶಾಲೆ ತೆರೆದರು. ಆದರೆ, ಯಾವ ಗೋಶಾಲೆಗಳಲ್ಲಿ ಮೇವು, ನೀರು ಒಳಗೊಂಡ ಸೌಲಭ್ಯ ಇಲ್ಲ, ಗೋಹತ್ಯೆ ನಿಷೇಧ ಕಾಯ್ದೆ ಬಂದ ನಂತರ ಗೋವುಗಳು ಲಕ್ಷದಷ್ಟು ಹೆಚ್ಚಾಗಬೇಕಿತ್ತು ಆದರೆ, ಯಾಕೆ ಆಗಿಲ್ಲ ಎಂದು ಪ್ರಶ್ನಿಸಿದ್ದರು.
ಇದಕ್ಕೆ ಉತ್ತರಿಸಿದ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್, ರೈತರಿಗೂ ಕಷ್ಟ ಇದೆ. ಒಕ್ಕೂಟವೂ ಕಷ್ಟದಲ್ಲಿದೆ ಹಾಗಾಗಿ ಬೇರೆಯವರ ಜೊತೆ ಸ್ಪರ್ಧೆ ಕಷ್ಟವಾಗುತ್ತಿದೆ. ಖಾಸಗಿಯವರು ಹೆಚ್ಚು ಹಣ ಕೊಡುತ್ತಿದ್ದಾರೆ. ಹಾಗಾಗಿ ಅವರಿಗೆ ರೈತರ ಹಾಲು ಹೋಗುತ್ತಿದೆ. ನಮ್ಮ ಒಕ್ಕೂಟ ನಷ್ಟದಲ್ಲಿವೆ. ಹಾಗಾಗಿ ಹಾಲಿನ ದರ ಹೆಚ್ಚಳ ಮಾಡುವ ನಿರ್ಧಾರ ಮಾಡಲಿದ್ದೇವೆ. ಎಷ್ಟು ಹೆಚ್ಚಿಸಬೇಕು ಎಂದು ಸಿಎಂ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ದರ ಹೆಚ್ಚಳ ಅನಿವಾರ್ಯ ಎಂದು ಹಾಲಿನ ದರ ಹೆಚ್ಚಳದ ಸುಳಿವು ನೀಡಿದ್ದರು.
ಇದನ್ನೂ ಓದಿ: ಅಮೂಲ್ ಜೊತೆ ನಂದಿನಿ ವಿಲೀನ ಇಲ್ಲ: ಒಕ್ಕೂಟ, ಉತ್ಪಾದಕರನ್ನು ಉಳಿಸಲು ಹಾಲಿನ ದರ ಪರಿಷ್ಕರಣೆ: ಸಚಿವ ವೆಂಕಟೇಶ್