ಬೆಂಗಳೂರು: ವಿಚ್ಛೇದನಕ್ಕೆ ಒತ್ತಾಯಿಸಿ ಪತ್ನಿಗೆ ಮಾನಸಿಕ ಹಿಂಸೆ ನೀಡಿ, ಜೀವ ಬೆದರಿಕೆ ಹಾಕಿದ ಆರೋಪದಡಿ ದೆಹಲಿ ಇಂಟಲಿಜೆನ್ಸ್ ಬ್ಯೂರೋದ ಇನ್ಸ್‌ಪೆಕ್ಟರ್ ವಿರುದ್ಧ ಬೆಂಗಳೂರಿನ ಯಲಹಂಕ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇನ್ಸ್ಪೆಪೆಕ್ಟರ್ ಶ್ರವಣ್ ಕುಮಾರ್ ವಿರುದ್ಧ ಅವರ ಪತ್ನಿ ಗರೀಮಾ ಕುಮಾರಿ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಪತ್ನಿ ಮಾಡಿರುವ ಆರೋಪ ಹೀಗಿದೆ: ಶ್ರವಣ್ ಕುಮಾರ್ ಹಾಗೂ ಗರೀಮಾ ಕುಮಾರಿ 2006ರಲ್ಲಿ ಮದುವೆಯಾಗಿದ್ದು, 13 ವರ್ಷ ವಯಸ್ಸಿನ ಮಗಳಿದ್ದಾಳೆ. ಈ ನಡುವೆ ವಿಚ್ಛೇದನ ಕೋರಿ ಶ್ರವಣ್ ಕುಮಾರ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಪತ್ನಿಯ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ. ಪತ್ನಿಯ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಂ ಖಾತೆ ತೆರೆದು ಖಾಸಗಿ ಫೋಟೋ, ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ಶ್ರವಣ್ ಕುಮಾರ್ ತಮ್ಮ ಚಾರಿತ್ರ್ಯವಧೆ ಮಾಡುತ್ತಿದ್ದಾರೆ ಎಂದು ಗರೀಮಾ ಆರೋಪಿಸಿದ್ದಾರೆ.
ಅಲ್ಲದೇ ಪಾನೀಯದಲ್ಲಿ ಮದ್ಯಪಾನ ಬೆರೆಸಿಕೊಟ್ಟು, ಕುಡಿಯುವಾಗ ತಮಗೆ ಗೊತ್ತಿಲ್ಲದಂತೆ ವಿಡಿಯೋ ಚಿತ್ರೀಕರಣ ಮಾಡಿಕೊಂಡು ನಕಲಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ. ಹಾಗೂ ವಿಚ್ಛೇದನ ನೀಡದಿದ್ದರೆ ಪತ್ನಿ ಮತ್ತು ಮಗಳನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಗರೀಮಾ ಕುಮಾರಿ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿದ್ದು, ಈ ನಡುವೆ ಪತ್ನಿಗೆ ಕಿರುಕುಳ ನೀಡಿರುವ ಆರೋಪದಡಿ ಶ್ರವಣ್ ಕುಮಾರ್ ವಿರುದ್ಧ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ದುಬಾರಿ ವಿಚ್ಛೇದನ: ಪತ್ನಿಗೆ 30 ಲಕ್ಷ, ಮಗಳ ಹೆಸರಿಗೆ 70 ಲಕ್ಷ ರೂ.; ಒಟ್ಟು ಕೋಟಿ ರೂ ಜಮೆ ಮಾಡಲು ಒಪ್ಪಿದ ಉದ್ಯಮಿ!
ದುಬಾರಿ ಸೆಟಲ್ಮೆಂಟ್ನಲ್ಲಿ ಅಂತ್ಯಗೊಂಡ ವಿಚ್ಛೇದನ( ಪಾಣಿಪತ್): ಒಂದು ಕೋಟಿ ರೂಪಾಯಿಗೂ ಅಧಿಕವಾದ ದುಬಾರಿ ಸೆಟಲ್ಮೆಂಟ್ನಲ್ಲಿ ದಂಪತಿಯೊಬ್ಬರ ವಿಚ್ಛೇದನ ಪ್ರಕರಣ ಅಂತ್ಯಗೊಂಡ ಘಟನೆ ಇತ್ತೀಚೆಗೆ ಹರಿಯಾಣದ ಪಾಣಿಪತ್ ಜಿಲ್ಲೆಯಲ್ಲಿ ನಡೆದಿತ್ತು.
ಜೀವನಾಂಶ ವೆಚ್ಚವಾಗಿ ಮಡದಿಗೆ 30 ಲಕ್ಷ 11 ಸಾವಿರ ಹಾಗೂ ಆರು ವರ್ಷದ ಬಗಳ: ಹೆಸರಿಗೆ 70 ಲಕ್ಷ ರೂ ನೀಡಲು ಉದ್ಯಮಿಯೊಬ್ಬರು ಒಪ್ಪಿಗೆ ನೀಡಿದ್ದರು. ಏಳು ವರ್ಷದ ಹಿಂದೆ ರೋಹ್ಟಕ್ನ ಉದ್ಯಮಿಯನ್ನು ಪಾಣಿಪತ್ ನಿವಾಸಿಯಾದ ಮಹಿಳೆಯೊಬ್ಬರು ಮದುವೆಯಾಗಿದ್ದರು. ಇವರಿಗೆ ಆರು ವರ್ಷದ ಮಗಳಿದ್ದು, ಕೌಟುಂಬಿಕ ದೌರ್ಜನ್ಯದ ಆರೋಪದ ಮೇಲೆ ಪತಿಗೆ ವಿಚ್ಛೇದನ ನೀಡಲು ಪತ್ನಿ ನಿರ್ಧರಿಸಿದ್ದರು. ಪತಿ ವಿಚ್ಛೇದನಕ್ಕೆ ಒಪ್ಪಿಕೊಂಡಿದ್ದು, ಅಲ್ಲದೆ 1 ಕೋಟಿ 110 ಸಾವಿರ ರೂಪಾಯಿ ಹಣ ನೀಡಲು ಕೂಡ ಒಪ್ಪಿಕೊಂಡಿದ್ದರು.
ಇದಕ್ಕೂ ಮುನ್ನ ಎರಡೂ ಕಡೆಯವರನ್ನು ಕರೆಸಿ, ರಾಜಿ ಸಂಧಾನ ಮಾಡುವ ಪ್ರಯತ್ನ ಮಾಡಲಾಗಿತ್ತು. ಆದರೆ ಎರಡೂ ಕಡೆಯವರು ವಿಚ್ಛೇದನಕ್ಕೆ ಪಟ್ಟು ಹಿಡಿದಿದ್ದರು. ಪತಿ ಮೇಲೆ ಕೌಟುಂಬಿಕ ದೌರ್ಜನ್ಯ ಆರೋಪ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದರು.