ಬೆಂಗಳೂರು: ಒಂದೇ ಪ್ರದೇಶದಲ್ಲಿ ಇಬ್ಬರು ಯುವಕರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಅಭಿಲಾಶ್ ಮತ್ತು ಗೋಪಿ ಮೃತಪಟ್ಟ ಯುವಕರೆಂದು ಗುರುತಿಸಲಾಗಿದೆ.
ಮಲ್ಲೇಶ್ವರಂ 13ನೇ ಕ್ರಾಸ್‌ನ ನಿವಾಸಿಯಾಗಿರುವ ಅಭಿಲಾಶ್ ಹೊಟ್ಟೆ ನೋವೆಂದು ಮನೆಯಲ್ಲಿ ನಿನ್ನೆ ಒದ್ದಾಡಿ ನಂತ್ರ ಮಾತ್ರೆ ಸೇವಿಸಿದ್ದಾನೆ. ನಂತರ ನೋವು ಜಾಸ್ತಿಯಾದ ಕಾರಣ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಆತ ಆಸ್ಪತ್ರೆಯಲ್ಲಿ ಇಂದು ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ದೊರೆತಿದೆ.
ಮತ್ತೊಂದೆಡೆ ಇದೇ ಪ್ರದೇಶದ ನಿವಾಸಿ ಗೋಪಿ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಸಾವಿನ ಹಿಂದೆ ಅನುಮಾನ:
ಯುವಕರ ಗುಂಪು ನಿನ್ನೆ ರಾತ್ರಿ ಬರ್ತ್‌ಡೇ ಪಾರ್ಟಿ ಮಾಡಿದ್ದು ಈ ವೇಳೆ ಎಂಟು ಯುವಕರ ತಂಡ ಗಾಂಜಾ ಸೇವನೆ ಮಾಡಿದೆ ಎನ್ನಲಾಗಿದೆ. ಹೀಗಾಗಿ ಅಭಿಲಾಶ್ ಮತ್ತು ಗೋಪಿ ಸಾವನ್ನಪ್ಪಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಸದ್ಯ ವೈಯಾಲಿಕಾವಲ್ ಪೊಲೀಸರು ಪ್ರಕರಣ ದಾಖಲಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಪೋಸ್ಟ್ ಮಾರ್ಟಮ್ ವರದಿಯ ಬಳಿಕ ಸಾವಿನ ಸತ್ಯಾಸತ್ಯತೆ ಬಗ್ಗೆ ಪೊಲೀಸರು ಮತ್ತಷ್ಟು ತನಿಖೆ ಕೈಗೊಳ್ಳಲಿದ್ದಾರೆ.