ಬೆಂಗಳೂರು: ರಾಜ್ಯದ ರೈತಪರ ಹೋರಾಟಗಾರ, ಹಿರಿಯ ಮಾರ್ಕ್ಸ್‌ವಾದಿ ಮಾರುತಿ ಮಾನ್ಪಡೆ ಹಾಗೂ ಹಿರಿಯ ಪತ್ರಕರ್ತ ಶ್ಯಾಮಸುಂದರ್ ನಿಧನಕ್ಕೆ ಹಲವು ರಾಜಕೀಯ ಗಣ್ಯರು ಹಾಗೂ ರೈತ ಪರ ಹೋರಾಟಗಾರರು ಸಂತಾಪ ಸೂಚಿಸಿದ್ದಾರೆ.
ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಮಾನ್ಪಡೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಡಿಸಿಎಂ ಮಾತನಾಡಿ, ಮಾನ್ಪಡೆ ನಿಧನ ತೀವ್ರ ದುಃಖ ಉಂಟು ಮಾಡಿದೆ. ಅವರು ಕೋವಿಡ್‌ಗೆ ತುತ್ತಾಗಿ ಅಗಲಿದ್ದಾರೆಂದು ಕೇಳಿ ಅತೀವ ವೇದನೆಯಾಗಿದೆ. ಅವರ ನಿಧನ ದೊಡ್ಡ ನಷ್ಟ ಮಾತ್ರವಲ್ಲ, ರೈತ ಮತ್ತು ಕಾರ್ಮಿಕ ಸಮುದಾಯ ತನ್ನ ಆತ್ಮೀಯ ದನಿಯೊಂದನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಬೆಂಗಳೂರಿನಲ್ಲಿ ಕಳೆದ ತಿಂಗಳು ಐಕ್ಯ ಹೋರಾಟ ಮಾಡಿದ ದಿನಗಳನ್ನು ನೆನೆದರು. ಮನುಷ್ಯನಿಗೆ ಯಾವುದು ಶಾಶ್ವತವಲ್ಲ ಅನ್ನುವಂತಾಗಿದೆ. ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟಕ್ಕೆ ಸ್ಪೂರ್ತಿ ನೀಡಿದ ಮಾರುತಿಮಾನ್ಪಡೆ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬವರ್ಗಕ್ಕೆ ಸಾವಿನ ದುಃಖ ಭರಿಸುವ ಶಕ್ತಿ ಬರಲಿ. ಹೈದರಾಬಾದ್ ಕರ್ನಾಟಕದ ಭಾಗದಲ್ಲಿ ಒಳ್ಳೆಯ ರೈತಪರ ಹೋರಾಟಗಾರರನ್ನು ಕಳೆದುಕೊಂಡಂತಾಗಿದೆ ಎಂದರು.
ಹಿರಿಯ ಪತ್ರಕರ್ತ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಶ್ಯಾಮಸುಂದರ್ ಹೃದಯಾಘಾತದಿಂದ ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹೊಸ ತಲೆಮಾರಿನ ಪತ್ರಕರ್ತರಿಗೆ ಇವರು ಆಕಾರ ಗ್ರಂಥದಂತೆ ಇದ್ದರು. ಜನಸಾಮಾನ್ಯರ ಸಮಸ್ಯೆಗಳಿಗೆ ಮಿಡಿಯುತ್ತಿದ್ದರು. ಅವರ ಅಗಲಿಕೆ ನನಗೆ ಅತೀವ ನೋವು ಉಂಟು ಮಾಡಿದೆ. ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಡಿಸಿಎಂ ಡಾ.ಸಿ ಎನ್ ಅಶ್ವತ್ಥ್ ನಾರಾಯಣ್ ಸಂತಾಪ ಸೂಚಿಸಿದರು.