ಬೆಂಗಳೂರು: ಕನ್ನಡ ಸಾಹಿತ್ಯ ಲೋಕದ ಪ್ರಸಿದ್ಧ ಬರಹಗಾರರು, ಚಿಂತಕರು, ನಾಟಕಕಾರರು ಆಗಿದ್ದ ಶ್ರೀನಿವಾಸ ವೈದ್ಯ ಅವರ ನಿಧನ ವಾರ್ತೆ ಆಘಾತ ತಂದಿದೆ. ಅವರ ಅಗಲುವಿಕೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಪಾರ ನಷ್ಟವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ ಮಹೇಶ ಜೋಶಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಂತಾಪ ಸಂದೇಶ ಹೊರಡಿಸಿರುವ ಡಾ. ಮಹೇಶ ಜೋಶಿ ಶ್ರೀನಿವಾಸ ವೈದ್ಯ ಮೂಲತಃ ಧಾರವಾಡ ಜಿಲ್ಲೆಯ ನವಲಗುಂದದಲ್ಲಿ 1936ರ ಏಪ್ರಿಲ್ 4 ರಂದು ಜನಿಸಿದ್ದರು. ತಂದೆ ಬಿ.ಜಿ. ವೈದ್ಯರು ಸುಪ್ರಸಿದ್ಧ ವಕೀಲರು. ತಾಯಿ ಸುಂದರಬಾಯಿ. ಇವರ ಅಜ್ಜ ಎಂದರೆ ತಾಯಿಯ ತಂದೆ ನರಗುಂದಕರ್ ರಾಮರಾ ಕರ್ನಾಟಕದ ಸಪ್ತರ್ಷಿಗಳಲ್ಲೊಬ್ಬರು ಎಂದು ಗುರುತಿಸಿಕೊಂಡವರು.
ತಮ್ಮ ವಿದ್ಯಾಭ್ಯಾಸವನ್ನೆಲ್ಲ ಧಾರವಾಡದಲ್ಲೇ ನಡೆಸಿದ ಶ್ರೀನಿವಾಸ ವೈದ್ಯರು 1959ರಲ್ಲಿ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರದ ಸ್ನಾತಕೋತ್ತರ ಪದವಿಯನ್ನೂ, ಬ್ಯಾಂಕಿಂಗ್ ಕ್ಷೇತ್ರದ ಪರೀಕ್ಷೆಗಳಲ್ಲಿ ಉತ್ತಮ ಸಾಧನೆಯನ್ನು, ಭಾರತೀಯ ವಿದ್ಯಾಭವನದ ಪತ್ರಿಕೋದ್ಯಮ ಡಿಪ್ಲೊಮಾ ಪದವಿಯನ್ನೂ ಪಡೆದುಕೊಂಡರು. ಹೈಸ್ಕೂಲಿನ ದಿನಗಳಲ್ಲಿ ಶ್ರೀನಿವಾಸ ವೈದ್ಯರು ಕೈಬರಹ ಪತ್ರಿಕೆಯಾದ 'ನಂದಾದೀಪ'ವನ್ನು ಪ್ರಾರಂಭಿಸಿದರು. ಕಾಲೇಜಿನ ಸಂಚಿಕೆಗಳಲ್ಲೇ ಅವರ ಮೊದಲ ಕತೆಯೂ ಪ್ರಕಟವಾಗಿತ್ತು. ಪತ್ರಿಕೆಗೆ ಅವರೊಡಗೂಡಿ ಸಹ ಸಂಪಾದಕರಾಗಿದ್ದವರು ಖ್ಯಾತ ಬರಹಗಾರ ಮಹಾದೇವ ಬಣಕಾರರು.
ಕಾಲೇಜಿನ ದಿನಗಳಲ್ಲಿ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿಯಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದರು. ʻಗಗ್ಗಯನ ಗಡಿಬಿಡಿʼ, ʻದಾಂಪತ್ಯದ ಬೊಂಬೆʼ, ʻತಿರುವು-ಮುರುವುʼ ಮುಂತಾದ ಅನೇಕ ನಾಟಕಗಳಲ್ಲಿ ಪಾತ್ರ ವಹಿಸಿದ್ದರು. ವಿದ್ಯಾವರ್ಧಕ ಸಂಘದವರು ಏರ್ಪಡಿಸುತ್ತಿದ್ದ ಸಾಹಿತ್ಯ ಸ್ಪರ್ಧೆಗಳಲ್ಲಿ ಅವರು ಹಲವಾರು ಬಹುಮಾನಗಳನ್ನು ಗಳಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಕಾಲೇಜು ವ್ಯಾಸಂಗದ ಸಮಯದಲ್ಲಿ ವಿ.ಕೃ ಗೋಕಾಕರಿಂದ ಪ್ರಭಾವಿತರಾಗಿದ್ದ ಶ್ರೀನಿವಾಸ ವೈದ್ಯರು ಪಿಎಚ್ಡಿ ಪಡೆಯಲು ಮುಂಬೈಗೆ ತೆರಳಿದರಾದರೂ 1959ರಲ್ಲಿ ಮುಂಬಯಿಯಲ್ಲಿ ಕೆನರಾ ಬ್ಯಾಂಕ್ ಅಧಿಕಾರಿಯಾಗಿ ಸೇರಿ, ಬೆಳಗಾವಿ, ಗೋವಾ, ಧಾರವಾಡ, ದೆಹಲಿ, ಚೆನ್ನೈ ಮತ್ತು ಬೆಂಗಳೂರುಗಳಲ್ಲಿ ಕಾರ್ಯನಿರ್ವಹಿಸಿ ಉಪ ಮಹಾಪ್ರಬಂಧಕರಾಗಿ 1996ರಲ್ಲಿ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದರು.
1984ರಲ್ಲಿ ಪ್ರಸಿದ್ಧ ಹಾಸ್ಯ ಬರಹಗಾರರಾದ ರಾಶಿ (ಡಾ. ಶಿವರಾಂ) ನಿಧನರಾದ ಸಂದರ್ಭದಲ್ಲಿ ಅವರ ಮಗ ಶಿವಕುಮಾರ್ ಅವರಿಗೆ ಬರೆದ ಸಾಂತ್ವನ ಪತ್ರದ ಭಾಷೆ, ಭಾವನೆಗಳನ್ನು ಮೆಚ್ಚಿದ ಶಿವಕುಮಾರ್ ಅವರು, ಶ್ರೀನಿವಾಸ ವೈದ್ಯರನ್ನು ಅಪರಂಜಿ ಪತ್ರಿಕೆಗೆ ಬರೆಯಲು ಪ್ರೇರೇಪಿಸಿದರು. ಹಾಸ್ಯ ಬರಹಗಳಿಗೆ ಮೀಸಲಾದ ಅಪರಂಜಿ ಪತ್ರಿಕೆಗೆ ಮುಂಬೈನಲ್ಲಿ ಕಂಡ ನಿತ್ಯ ಬದುಕಿನ ಸಂಗತಿಗಳಿಗೆ ನಗೆಲೇಪ ಹಚ್ಚುತ್ತಾ ಬರೆಯತೊಡಗಿದರು. ಹೀಗೆ ಶ್ರೀನಿವಾಸ ವೈದ್ಯರು ಬರೆದ ಪ್ರಥಮ ಲೇಖನ 'ಸ್ಯಾರಿಗಾರ್ಡ್'. ಮುಂದೆ 1994ರ ವರ್ಷದಲ್ಲಿ ಇಂಥ ಲೇಖನಗಳ ಸಂಕಲನ ರೂಪವಾಗಿ 'ತಲೆಗೊಂದು ತರತರ' ಪ್ರಕಟಗೊಂಡಿತು. ಧಾರವಾಡ ಭಾಷೆಯನ್ನು ವಿಶಿಷ್ಟ ರೀತಿಯಲ್ಲಿ ಉಪಯೋಗಿಸಿಕೊಂಡ ಈ ಕೃತಿ ವೈದ್ಯರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು ಎಂದು ಹೇಳಿದ್ದಾರೆ.
1997 ರಲ್ಲಿ 'ಮನಸುಖರಾಯನ ಮನಸು' ಲಲಿತ ಪ್ರಬಂಧಗಳ ಸಂಕಲನ, 2003 ರಲ್ಲಿ 'ರುಚಿಗೆ ಹುಳಿಯೊಗರು' ಹಾಸ್ಯ ಪ್ರಬಂಧಗಳ ಸಂಕಲನಗಳು ಹಲವಾರು ಪುನರ್ಮುದ್ರಣಗಳನ್ನು ಕಂಡಿರುವುದೇ ಅವರ ಜನಪ್ರಿಯತೆಗೆ ಸಾಕ್ಷಿ. ನಾನು ಗುರುತಿಸಿದಂತೆ ಲಘು - ಗಂಭೀರ ಬರಹಗಳೆಂದು ವಿಭಾಗ ಮಾಡಲಾಗದ, ಕಥೆ, ಪ್ರಬಂಧಗಳೆಂದು ಪ್ರತ್ಯೇಕಿಸಲಾಗದ ವಿಶಿಷ್ಟ ರೀತಿಯ ಬರಹಗಳನ್ನು ಶ್ರೀನಿವಾಸ ವೈದ್ಯರು ಹುಟ್ಟುಹಾಕಿದರು. ನಂತರ ಗಂಭೀರ ಸಾಹಿತ್ಯದತ್ತ ಹೊರಳಿದ ವೈದ್ಯರು ಅನೇಕ ಕಥೆಗಳನ್ನೂ, ಕಾದಂಬರಿಯನ್ನೂ ರಚಿಸಿದರು.
ಜಂಟಿ ಕುಟುಂಬದಲ್ಲಿದ್ದ ಹಿರಿಯ ವ್ಯಕ್ತಿತ್ವದ ಅವರ ಅಜ್ಜ ಬೀರಿದ ಪ್ರಭಾವದಿಂದ ಕಾದಂಬರಿ ರಚಿಸಲು ಮುಂದಾಗಿ ಬರೆದ ಕಾದಂಬರಿಯೇ 'ಹಳ್ಳ ಬಂತು ಹಳ್ಳ'. ಇದು 2004ರಲ್ಲಿ ಮೂಡಿಬಂತು. ಇದೇ ಕೃತಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕಾರಗಳು ಲಭಿಸಿದ್ದವು. 2007ರಲ್ಲಿ ಹೊರಬಂದ ಸಣ್ಣ ಕತೆಗಳ ಸಂಕಲನ 'ಅಗ್ನಿಕಾರ್ಯ' ಅಪಾರ ಜನಪ್ರಿಯತೆಗಳಿಸಿದೆ. ನಿವೃತ್ತಿಯ ನಂತರವೇ ಬರವಣಿಗೆಯಲ್ಲಿ ತೊಡಗಿಸಿಕೊಂಡ ವೈದ್ಯರ ಕಥೆ, ಕಾದಂಬರಿಗಳನ್ನು ಓದುವುದೆಂದರೆ ಎಲ್ಲೋ ಕಾಣೆಯಾಗಿದ್ದ ಬಂಧು-ಬಳಗದವರನ್ನು ಮತ್ತೆ ಭೇಟಿಯಾದಂತೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ʻಕಪ್ಪೆ ನುಂಗಿದ ಹುಡುಗʼ (ಕತೆಗಳು) 2001ರಲ್ಲಿ ಮತ್ತು ಕರ್ನಲ್ಗೆ ಯಾರೂ ಬರೆಯುವುದೇ ಇಲ್ಲ (ಮಾರ್ಕ್ವೇಝ್ನಲರ ಕಾದಂಬರಿಯ ಅನುವಾದ) 2013ರಲ್ಲಿ ಪ್ರಕಟಗೊಂಡಿತು.'ಇನ್ನೊಂದು ಸಂತೆ' ಅನುಭವ ಕಥನಗಳು ಪ್ರಕಟಗೊಂಡಿತು. ಶ್ರೀನಿವಾಸ ವೈದ್ಯರ ಹಲವಾರು, ಕಥೆ, ಹಾಸ್ಯಬರಹಗಳು ನಾಟಕಕ್ಕೆ ಅಳವಡಿತಗೊಂಡು ರಂಗಪ್ರದರ್ಶನಗಳನ್ನು ಕಂಡಿವೆ. ಅವುಗಳಲ್ಲಿ ʻಶ್ರದ್ಧಾʼ ಮತ್ತು ʻಹಣತೆಗಳುʼ, ʻಬದುಕಲು ಕಲಿಯಿರಿʼ, ʻಕ್ರಯಸ್ಥʼ, ʻಬಿದ್ದೂರಿನ ಬಿಗ್‌ಬೆನ್ʼ, ʻದತ್ತೋಪಂತನ ಪತ್ತೇದಾರಿʼ, ʻಗಂಢ ಭೇರುಂಡʼ, ʻಮನಸುಖರಾಯನ ಮನಸುʼ ಮುಂತಾದವುಗಳು ಸೇರಿವೆ. ಈ ನಾಟಕಗಳು ಹಲವು ರಂಗ ಪ್ರಯೋಗಗಳನ್ನು ಕಂಡಿದೆ ಎಂದು ನೆನಪಿಸಿಕೊಂಡು ಕಂಬನಿ ಮಿಡಿದಿದ್ದಾರೆ.
ಶ್ರೀನಿವಾಸ ವೈದ್ಯರು 1997ರಲ್ಲಿ 'ಸಂವಾದ ಟ್ರಸ್ಟ್' ಸ್ಥಾಪಿಸಿ, ನಾಡಿನ ಖ್ಯಾತ ಬರಹಗಾರರಿಂದ ಉಪನ್ಯಾಸ, ವಾಚನ, ಸಂವಾದ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಕ್ರಿಯಾಶೀಲರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ನಿಕಟ ಸಂಬಂಧ ಹೊಂದಿದ್ದ ಇವರು ನನ್ನೊಂದಿಗೆ ಸಹ ಆತ್ಮೀಯ ಸಂಬಂಧ ಇಟ್ಟುಕೊಂಡಿದ್ದರು. ದೂರದರ್ಶನದಲ್ಲಿ ಶ್ರೀನಿವಾಸ ವೈದ್ಯರ ಮೂಲಕ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿದ್ದೆ, ಅವರ ಅಗಲುವಿಕೆ ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಆಘಾತವನ್ನು ತಂದಿದೆ ಎಂದು ಡಾ. ಮಹೇಶ ಜೋಶಿ ವಿಷಾದ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮೇರುನಟ ಮಮ್ಮುಟ್ಟಿಗೆ ಮಾತೃ ವಿಯೋಗ: ಫಾತಿಮಾ ಇಸ್ಮಾಯಿಲ್ ಇನ್ನಿಲ್ಲ!