ಬೆಂಗಳೂರು: ನಗರದಲ್ಲಿ ಡ್ರಗ್ಸ್ ದಂಧೆಕೋರರನ್ನು ಮಟ್ಟಹಾಕಲು ಪೊಲೀಸರು ಸಮರ ಸಾರಿದ್ದಾರೆ.
ಹೌದು, ಸಾರ್ವಜನಿಕರು ಸುಮ್ಮನಿದ್ದರೂ ಸಹ ಗಾಂಜಾ ವ್ಯಸನಿಗಳು ಊರವರನ್ನೆಲ್ಲಾ ಹಾಳು ಮಾಡುತ್ತಾರೆ. ಹಾಗಾಗಿ ಅಂಥವರ ವಿರುದ್ದ ಎಚ್ಚೆತ್ತುಕೊಳ್ಳುವಂತೆ ನಗರ ಪೂರ್ವ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಮನವಿ ಮಾಡಿದ್ದಾರೆ.
ಯಾವುದೋ ಊರಿನ ವ್ಯಕ್ತಿಗಳು ನಿಮ್ಮ ಏರಿಯಾದಲ್ಲಿ ಬಂದು ಗಾಂಜಾ ಮಾರುವಾಗ ನೀವು ಹೇಗೆ ಸಹಿಸ್ಕೋತೀರಾ. ಓರ್ವ ಘಾತುಕ ವ್ಯಕ್ತಿಗಾಗಿ ನೀವು ಯಾರೂ ಹೆದರಿಕೊಳ್ಳುವ ಆವಶ್ಯಕತೆ ಇಲ್ಲ. ನಿಮ್ಮ ಜೊತೆ ನಾವಿದ್ದೇವೆ ಎಂದು ಅಭಯ ನೀಡಿದ್ದಾರೆ ಡಿಸಿಪಿ.
ಇತ್ತೀಚಿನ ದಿನಗಳಲ್ಲಿ ಕೆ.ಜಿ. ಹಳ್ಳಿ. ಡಿ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಡ್ರಗ್ಸ್ ದಂಧೆ ಅವ್ಯಾಹತವಾಗಿ ನಡೆದಿತ್ತು. ಈ ಸಂಬಂಧ ಕಳೆದ ವಾರ ಕಾವಲ್ ಬೈರಸಂದ್ರದಲ್ಲಿ ಸಾರ್ವಜನಿಕ ಸಭೆ ನಡೆಸಿ ಡ್ರಗ್ಸ್ ದಂಧೆಯಿಂದ ದೂರ ಇರುವಂತೆ ಜಾಗೃತಿ ಮೂಡಿಸಿದ್ದರು. ಇದೀಗ ಡ್ರಗ್ಸ್ ದಂಧೆಕೋರರನ್ನು ಸದೆಬಡಿಯಲು ಪೊಲೀಸರೊಂದಿಗೆ ಸಹಕರಿಸುವಂತೆ ಸಾರ್ವಜನಿಕರಿಗೆ ಡಿಸಿಪಿ ರಾಹುಲ್ ಕುಮಾರ್ ಮನವಿ ಮಾಡಿದ್ದಾರೆ.