ಬೆಂಗಳೂರು : ಕೆಆರ್‌ಪುರಂ ಪೊಲೀಸ್ ಠಾಣೆಯಲ್ಲಿ ಇಂದು ಮಾಸಿಕ ಜನಸಂಪರ್ಕ ದಿನವನ್ನು ಆಚರಿಸಲಾಯಿತು. ಮಾಸಿಕ ಜನ ಸಂಪರ್ಕ ಸಭೆಯಲ್ಲಿ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್, ಎಸಿಪಿ ಮನೋಜ್ ಕುಮಾರ್, ಕೆಆರ್‌ಪುರಂ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಅಂಬರೀಶ್ ಹಾಗೂ ಠಾಣೆ ಸಿಬ್ಬಂದಿ ವರ್ಗ ಸಾರ್ವಜನಿಕರ ಸಮಸ್ಯೆ ಆಲಿಸಿದರು. ಎರಡ್ಮೂರು ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಸಾರ್ವಜನಿಕರು ಹಿಂಜರಿಕೆಯಿಲ್ಲದೆ ಪ್ರಶ್ನೆಗಳಿಗೆ ಉತ್ತರ ಪಡೆಯಬಹುದು. ಒಂದು ವೇಳೆ ನಿಮಗೆ ದೂರು ನೀಡಲು ಸಮಯದ ಅಭಾವವಿದ್ದರೆ 112ಕ್ಕೆ ಕರೆ ಮಾಡಿ ದಾಖಲಿಸಬಹುದು ಎಂದು ಸಲಹೆ ನೀಡಿದರು.
ಕೆಆರ್‌ಪುರಂ ಪೊಲೀಸ್ ಠಾಣೆಯಲ್ಲಿ ಮಾಸಿಕ ಜನ ಸಂಪರ್ಕ ಸಭೆ ನಂತರ ಮಾತನಾಡಿದ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್, ಬೆಂಗಳೂರು ವ್ಯಾಪ್ತಿಯಲ್ಲಿ ಈ ಹಿಂದೆ ಚಾಲ್ತಿಯಲ್ಲಿದ್ದ ಜನ ಸಂಪರ್ಕ ಸಭೆಯನ್ನು ಮತ್ತೆ ಆರಂಭ ಮಾಡಲಾಗಿದೆ. ಬೆಂಗಳೂರು ನಗರ ಕಮಿಷನರ್ ಕಮಲ್ ಪಂತ್ ಸೂಚನೆ ಮೇರೆಗೆ ಸಭೆ ಮಾಡಲಾಗಿದೆ ಎಂದರು. ಈ ನಿಟ್ಟಿನಲ್ಲಿ ಕೆಆರ್‌ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರ ಎದುರಿಸುತ್ತಿದ್ದ ಸಮಸ್ಯೆಗಳನ್ನು ಆಲಿಸಲು ಬೆಳ್ಳಗೆ 11 ರಿಂದ ಮಧ್ಯಾಹ್ನ 1ಗಂಟೆಯವರೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಪ್ರತಿ ತಿಂಗಳ 4ನೇ ಶನಿವಾರ ಜನಸಂಪರ್ಕ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಕೆಆರ್‌ಪುರಂ ವ್ಯಾಪ್ತಿಯಲ್ಲಿ ಆಟೋಚಾಲಕರು ಪ್ರಯಾಣಿಕರಲ್ಲಿ ಅಗತ್ಯಕ್ಕಿಂತ ಹೆಚ್ಚು ಹಣ ಪಡೆಯುತ್ತಿದ್ದಾರೆ ಎಂದು ದೂರು ಬಂದಿದೆ. ಈಗಾಗಲೇ ಟ್ರಾಫಿಕ್ ಇನ್ಸ್‌ಪೆಕ್ಟರ್‌ಗೆ ತಿಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹೀಗಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಜೊತೆಗೆ ಸರಗಳ್ಳತನ ಬಗ್ಗೆ ದೂರು ಬಂದಿವೆ.
ಸರಗಳ್ಳತನ ಗಂಭೀರ ಪ್ರಕರಣವಾಗಿರುವುದರಿಂದ ಸಾರ್ವಜನಿಕರ ಸುರಕ್ಷತೆಗಾಗಿ ರಾತ್ರಿ ವೇಳೆ ಬೀಟ್ ಹೆಚ್ಚಿಸಲಾಗುವುದು ಹಾಗೂ ಅನುಮಾನಾಸ್ಪದವಾಗಿ ಕಂಡು ಬರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಪಡೆಯಲು ತಿಳಿಸಲಾಗಿದೆ ಎಂದರು.ಮುಖ್ಯವಾಗಿ ಮಾರುಕಟ್ಟೆಗಳ ಬಳಿ ವಾಹನ ಕಳ್ಳತನಗಳು ಹೆಚ್ಚಾಗುತ್ತಿವೆ. ಅದರಲ್ಲೂ ಬೈಕ್ಗಳ ಕಳವು ಹೆಚ್ಚಾಗಿದೆ. ಈಗಾಗಲೇ ವರ್ತಕರ ಸಂಘದವರ ಜತೆ ಮಾತನಾಡಲಾಗಿದ್ದು, ಸಿಸಿಟಿವಿ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.