ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಮಂಗಳವಾರ ಶಾಸಕಾಂಗ ಪಕ್ಷದ ಸಭೆ ಕರೆದರೆ, ಇನ್ನೊಂದೆಡೆ ಡಿಸಿಎಂ ಪರಮೇಶ್ವರ್ ಕಾಂಗ್ರೆಸ್ ಸಚಿವರಿಗೆ ಉಪಹಾರ ಕೂಟ ಆಯೋಜಿಸಿದ್ದಾರೆ.
ನಾಳೆ ಬೆಳಿಗ್ಗೆ ತಮ್ಮ ಸದಾಶಿವ ನಗರದ ಸರ್ಕಾರಿ ನಿವಾಸದಲ್ಲಿ ಸಚಿವರಿಗೆ ಉಪಹಾರ ಕೂಟ ಆಯೋಜಿಸಿದ್ದು, ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಪಕ್ಷದ ಎಲ್ಲಾ ಸಚಿವರು ಪಾಲ್ಗೊಳ್ಳುವಂತೆ ಈ ಆಹ್ವಾನದ ಮೂಲಕ ತಿಳಿಸಲಾಗಿದೆ. ಪಕ್ಷದ ಶಾಸಕರ ಸಾಲು ಸಾಲು ರಾಜೀನಾಮೆ ಹಾಗೂ ಮೈತ್ರಿ ಸರ್ಕಾರಕ್ಕೆ ಎದುರಾಗಿರುವ ಗಂಡಾಂತರ ನಿವಾರಣೆಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಕೂಡ ಇದೇ ಸಂದರ್ಭ ಸಚಿವರೊಂದಿಗೆ ಡಿಸಿಎಂ ಚರ್ಚಿಸಲಿದ್ದಾರೆ.
ಆರು ವರ್ಷ ಸಚಿವರಾಗಿ ಕಾರ್ಯನಿರ್ವಹಿಸಿರುವ ಸಚಿವರನ್ನು ಕೈ ಬಿಡುವ ನಿರ್ಧಾರ ನಡೆದಿದ್ದು, ಹೊಸಬರಿಗೆ ಅವಕಾಶ ನೀಡುವ ಚಿಂತನೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಪ್ರಮುಖವಾಗಿ ಚರ್ಚಿಸುವ ಉದ್ದೇಶ ಕೂಡ ನಾಳಿನ ಉಪಹಾರ ಕೂಟದಲ್ಲಿ ಹೊಂದಲಾಗಿದೆ ಎನ್ನಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಾಯಕತ್ವ ಬದಲಾವಣೆಯ ಮಾತು ಕೇಳಿ ಬಂದಿದ್ದು, ತಮ್ಮ ಸ್ಥಾನಕ್ಕೆ ಕುತ್ತು ಬರದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕೂಡ ಕೂಟದಲ್ಲಿ ಡಿಸಿಎಂ ಪರಮೇಶ್ವರ್ ಎಲ್ಲಾ ಸಚಿವರನ್ನು ವಿಶ್ವಾಸಕ್ಕೆ ಪಡೆಯುವ ಸಾಧ್ಯತೆ ಇದೆ. ಮಂಗಳವಾರ ಬೆಳಿಗ್ಗೆ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶಾಸಕಾಂಗ ಸಭೆ ಕರೆದು ಕಡ್ಡಾಯವಾಗಿ ಹಾಜರಿರುವಂತೆ ಸೂಚನೆ ನೀಡಿದ್ದಾರೆ. ಈ ಮಧ್ಯೆ ಡಿಸಿಎಂ ಡಾ. ಜಿ.ಪರಮೇಶ್ವರ್ ಕೂಡ ಉಪಹಾರ ಕೂಟ ಆಯೋಜಿಸಿರುವುದು ಪಕ್ಷ ಬಲವರ್ಧನೆಗೆ ಕಾಂಗ್ರೆಸ್ ನಡೆಸಿರುವ ಪ್ರಯತ್ನ ಎನ್ನಲಾಗ್ತಿದೆ.