ಬೆಂಗಳೂರು: ನಾನು ಸನ್ಯಾಸಿಯಲ್ಲ, ನನಗೂ ಸಹಜವಾಗಿ ರಾಜಕೀಯ ಅಪೇಕ್ಷೆಗಳಿವೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ, ತಮ್ಮ ಸಚಿವ ಸ್ಥಾನದ ಅಪೇಕ್ಷೆಯನ್ನು ಹೊರಹಾಕಿದ್ದಾರೆ. ವಿಕಾಸಸೌಧದಲ್ಲಿ ಮಾತನಾಡಿದ ಅವರು, ಪರಿಷತ್ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. 'ಕಾಲಾಯ ತಸ್ಮೈ ನಮಃ' ಯಾರು ಅಭ್ಯರ್ಥಿ ಅಂತಾ ನಮ್ಮ ಪಕ್ಷದ ಮುಖಂಡರು ತೀರ್ಮಾನ ಮಾಡುತ್ತಾರೆ ಎಂದು ಹೇಳಿ, ಪರಿಷತ್ ಚುನಾವಣೆ ಸ್ಪರ್ಧೆ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿಲ್ಲ.
ಲಕ್ಷ್ಮಣ ಸವದಿ ಸ್ಥಾನ ಉಳಿಸಿಕೊಳ್ಳಲು ಬೇರೆ ಪರಿಷತ್ ಸದಸ್ಯರು ತ್ಯಾಗ ಮಾಡ್ತಾರೆ ಎಂಬ ವಿಚಾರವಾಗಿ ಮಾತನಾಡಿ, ನಾನು ಭವಿಷ್ಯ ಹೇಳಲು ಹೋಗಲ್ಲ. ಏನಾಗುತ್ತದೆ ಅಂತಾ ನಿಮ್ಮಂತೆಯೇ ನನಗೂ ಕುತೂಹಲವಿದೆ ಎಂದರು. ಈ ಕುರಿತು ನಿರ್ಧರಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿದ್ದಾರೆ. ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ ಎಂದರು. ಕೆಲವರು ತ್ಯಾಗ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ತ್ಯಾಗ ಮಾಡುವುದು ಬಿಡುವುದು ಅವರ ವೈಯಕ್ತಿಕ ನಿರ್ಧಾರ. ಯಾರನ್ನು ಮಂತ್ರಿ ಮಾಡಬೇಕು, ಕೈ ಬಿಡಬೇಕು ಎಂಬುದು ಹೈಕಮಾಂಡ್ಗೆ ಗೊತ್ತಿದೆ. ಹೈಕಮಾಂಡ್ ತೀರ್ಮಾನವೇ ಅಂತಿಮ, ಅದಕ್ಕೆ ಎಲ್ಲರೂ ಬದ್ಧ ಎಂದು ಸ್ಪಷ್ಟಪಡಿಸಿದರು.
'ಒನ್ ನೇಷನ್ ಒನ್ ಟ್ಯಾಕ್ಸ್'
ಕೇಂದ್ರ ಸರ್ಕಾರ 'ಒನ್ ನೇಷನ್ ಒನ್ ಟ್ಯಾಕ್ಸ್' ತರಲು ನಿರ್ಧರಿಸಿದೆ. ಹೆಚ್ಚು ಬೆಲೆಯುಳ್ಳ ವಾಹನಗಳ ನೋಂದಣಿ ಬೇರೆ ಬೇರೆ ರಾಜ್ಯಗಳಲ್ಲಿ ಮಾಡುತ್ತಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಒಂದೇ ಟ್ಯಾಕ್ಸ್ ಇರಬೇಕು ಎಂದು ಹೇಳಿದೆ. ನಮ್ಮ ರಾಜ್ಯ ಬಜೆಟ್ ಅಧಿವೇಶನದಲ್ಲಿ ಈ ಕಾನೂನು ಜಾರಿಗೆ ತರುವ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದರು.
'ಒನ್ ನೇಷನ್ ಒನ್ ಟ್ಯಾಕ್ಸ್' ಜಾರಿಗೆ ತಂದರೆ ಒಂದು ಸಾವಿರ ಕೋಟಿ ಕೊರತೆಯಾಗಬಹುದು ಎಂದು ಅಂದಾಜಿಸಲಾಗಿದೆ. ಹಾಲಿ ಮೂರು ಸ್ಲ್ಯಾಬ್ಗಳಲ್ಲಿ ರಾಜ್ಯ ಸರ್ಕಾರ ತೆರಿಗೆ ವಿಧಿಸುತ್ತಿದೆ. ರಾಜ್ಯ ಸರ್ಕಾರದ ವಾಹನ ಟ್ಯಾಕ್ಸ್ ಸ್ಲ್ಯಾಬ್ 16%, 18%, 20% ರೀತಿಯಾಗಿ ತೆರಿಗೆ ಹಾಕುತ್ತಿದ್ದೇವೆ. ಕೇಂದ್ರ ಸರ್ಕಾರ ಕೂಡ 8%, 12%, 10% ಸ್ಲ್ಯಾಬ್ಗಳಲ್ಲಿ ತೆರಿಗೆ ಹಾಕುತ್ತಿದೆ ಎಂದು ವಿವರಿಸಿದರು.
ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನೌಕರರ ಮುಷ್ಕರ ವಿಚಾರವಾಗಿ ಮಾತನಾಡಿ, 1.30 ಲಕ್ಷ ಚಾಲಕರು ಮತ್ತು ನಿರ್ವಾಹಕರು ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮನ್ನು ಸರ್ಕಾರಿ ನೌಕರರು ಅಂತ ಪರಿಗಣಿಸಲು ಒತ್ತಾಯಿಸಿದ್ದಾರೆ. ಈ ಬಗ್ಗೆ ಹಲವು ವರ್ಷಗಳಿಂದ ಬೇಡಿಕೆಯಿದೆ. ಈ ಬಗ್ಗೆ ಸಮಿತಿ ರಚಿಸಲು ಸಿಎಂ ಸೂಚನೆ ನೀಡಿದ್ದಾರೆ ಎಂದರು. ಇದನ್ನು ಹೊರತುಪಡಿಸಿ ಇನ್ನೂ ಅನೇಕ ನಿಗಮ ಮಂಡಳಿಗಳಿವೆ. ಈ ನಿಗಮದ ನಂತರ ಬೇರೆ ನಿಗಮಗಳಿಗೆ ಬೇಡಿಕೆ ಇಡುವ ಸಾಧ್ಯತೆ ಇದೆ. ಹೀಗಾಗಿ ಇದನ್ನು ಪರಿಶೀಲಿಸಿ ಸರ್ಕಾರ ತೀರ್ಮಾನಿಸಲಿದೆ ಎಂದು ವಿವರಿಸಿದರು.