ಬೆಂಗಳೂರು: ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ವಿಧಾನಸೌಧದವರೆಗೆ ಇಂದು ಬೆಳಗ್ಗೆ ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಎಲೆಕ್ಟ್ರಿಕ್ ಬಸ್ನಲ್ಲಿ ಪ್ರಾಯೋಗಿಕ ಸಂಚಾರ ಕೈಗೊಂಡು ಬಸ್ನ ಕಾರ್ಯ ಕ್ಷಮತೆಯನ್ನು ಖುದ್ದಾಗಿ ಪರಿಶೀಲಿಸಿದರು.
ವಿಧಾನಸೌಧಕ್ಕೆ ಈ ಬಸ್ ತಲುಪಿದಾಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಬಸ್ ಪರಿಶೀಲಿಸಿ ನೂತನ ವ್ಯವಸ್ಥೆಯನ್ನು ಶ್ಲಾಘಿಸಿದರು.
ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಡಿಸಿಎಂ ಸವದಿ ಅವರು, ಕೇಂದ್ರ ಸರ್ಕಾರವು ಫೇಮ್-2 ಯೋಜನೆಯಡಿಯಲ್ಲಿ ಪ್ರತಿ ಬಸ್ಗೆ ನೀಡುವ 55 ಲಕ್ಷ ರೂ. ಮತ್ತು ಕರ್ನಾಟಕ ಸರ್ಕಾರವು ನೀಡುವ ರೂ.33.33 ಲಕ್ಷ (ಪ್ರತಿ ಬಸ್ಗೆ) ಆರ್ಥಿಕ ಸಹಾಯವನ್ನು ಸಂಯೋಜಿಸಿಕೊಂಡು ಪ್ರತಿ ಬಸ್ಗೆ 88.33 ಲಕ್ಷ ರೂ. ಗಳಂತೆ (ರೂ.55 ಲಕ್ಷ+ರೂ.33.33 ಲಕ್ಷ) ಪ್ರೋತ್ಸಾಹಧನದೊಂದಿಗೆ ಎಲೆಕ್ಟ್ರಿಕ್ ಬಸ್‍ಗಳ ಸಂಚಾರವನ್ನು ಹಂತ ಹಂತವಾಗಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಈ ತಿಳಿಸಿದರು.
ಬೆಂಗಳೂರಿನಲ್ಲಿ ವಿವಿಧ ಕಂಪನಿಗಳು ತಾವು ತಯಾರಿಸಿದ ಎಲೆಕ್ಟ್ರಿಕ್ ಬಸ್‍ಗಳನ್ನು ನಿಗದಿತ ಅವಧಿಗೆ ಪ್ರಾಯೋಗಿಕವಾಗಿ ಸಂಚಾರಕ್ಕೆ ಒದಗಿಸಲಿವೆ. ಇವುಗಳ ಕಾರ್ಯ ಕ್ಷಮತೆಯನ್ನು ಪರಿಶೀಲಿಸಿ ಮುಂದೆ ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಿಕ್ ಬಸ್‍ಗಳನ್ನು ಅನುಮತಿ ನೀಡಲು ನಮ್ಮ ಸರ್ಕಾರ ಉದ್ದೇಶಿಸಿದೆ. ಎಲೆಕ್ಟ್ರಿಕ್ ಬಸ್‍ಗಳ ಬಳಕೆಯಿಂದ ಮಾಲಿನ್ಯದ ಪ್ರಮಾಣ ಕಡಿಮೆಯಾಗುವುದಲ್ಲದೇ ಸಾರಿಗೆ ಸಂಸ್ಥೆಗಳಿಗೆ ವೆಚ್ಚದಲ್ಲಿ ಉಳಿತಾಯವೂ ಸಾಧ್ಯವಾಗಲಿದೆ. ಅಷ್ಟೇ ಅಲ್ಲ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸೇವೆ ಒದಗಿಸುವುದಕ್ಕೂ ಸಾಧ್ಯವಾಗಲಿದೆ ಎಂದು ಸವದಿ ವಿವರಿಸಿದರು.
ಈ ವೇಳೆ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಹಾಗೂ ಬಿಎಂಟಿಸಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಓಲೆಕ್ಟಾ ಗ್ರೀನ್‍ಟೆಕ್ ಸಂಸ್ಥೆಯ ಹವಾ ನಿಯಂತ್ರಿತ ಎಲೆಕ್ಟ್ರಿಕ್ ಬಸ್ನ ವಿವರ:
- ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್ನ ಉದ್ದ 12 ಮೀಟರ್ ಇದ್ದು, ಫ್ಲೋರ್ ಎತ್ತರ 400ಮಿ.ಮೀ ಇರುತ್ತದೆ.
- 34+1 ಪ್ರಯಾಣಿಕರ ಆಸನಗಳನ್ನು ಹೊಂದಿರುತ್ತದೆ.
- ಆಟೋಮ್ಯಾಟಿಕ್ ಗೇರ್ ವ್ಯವಸ್ಥೆಯಿದ್ದು, ಮುಂಬದಿ ಹಾಗೂ ಹಿಂಬದಿ ಡಿಸ್ಕ್ ಬ್ರೇಕ್ ಒಳಗೊಂಡಂತೆ ಎಲೆಕ್ಟ್ರಾನಿಕ್ ನಿಯಂತ್ರಿತ ಏರ್ ಸಸ್ಪೆನ್ಷನ್ ಹೊಂದಿರುತ್ತದೆ.
- ಒಂದು ಬಾರಿ ಚಾರ್ಜ್ ಮಾಡಿದಲ್ಲಿ 200-250 ಕಿ.ಮೀಗಳ ಹವಾ ನಿಯಂತ್ರಣದೊಂದಿಗೆ ಸಂಚಾರ ದಟ್ಟಣೆಯಲ್ಲಿ ಚಲಿಸುತ್ತದೆ. ಮಧ್ಯದಲ್ಲಿ ಚಾರ್ಜಿಂಗ್ ವ್ಯವಸ್ಥೆ ಒದಗಿಸುವ ಅವಶ್ಯಕತೆ ಇರುವುದಿಲ್ಲ.
-100-125 ಪ್ರಯಾಣಿಕರ ಸ್ಥಿರ ತೂಕದೊಂದಿಗೆ ಕಾರ್ಯಾಚರಣೆ ಮಾಡಬಹುದು.
- ಈ ಬಸ್ಗಳಲ್ಲಿ ವಿಶೇಷವಾಗಿ ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರ ಅನುಕೂಲಕ್ಕಾಗಿ ನಿಲಿಂಗ್ ಮೆಕ್ಯಾನಿಸಂ ವೀಲ್ ಚೇರ್ ವ್ಯವಸ್ಥೆ ಅಳವಡಿಸಲಾಗಿರುತ್ತದೆ.
- ಈ ಬಸ್ ಕೇಂದ್ರ ಮೋಟಾರು ವಾಹನ ನಿಯಮಾನುಸಾರವಿದ್ದು, ಎಐಎಸ್052 ಮತ್ತು ಹೋಮೋಲೋಗೆಶನ್ ಆಗಿರುತ್ತದೆ.
-ಬಸ್ನಲ್ಲಿ ಇದಲ್ಲದೇ ಬೇರೆ ವಿನ್ಯಾಸಗಳಾದ ಮೊಬೈಲ್ ಚಾರ್ಜ್‍ಗಾಗಿ ಯುಎಸ್‍ಬಿ ಚಾರ್ಜರ್ ವ್ಯವಸ್ಥೆ, ಎಮರ್ಜೆನ್ಸಿ ಅಲಾರ್ಮ್, ನಿಲುಗಡೆ ಬಟನ್, ಪ್ರಥಮ ಚಿಕಿತ್ಸಾ ಕಿಟ್, ಗಾಜು ಒಡೆಯಲು ಸುತ್ತಿಗೆ, ಸುರಕ್ಷತೆಗಾಗಿ ತುರ್ತು ನಿರ್ಗಮನ ವ್ಯವಸ್ಥೆಯನ್ನು ಒದಗಿಸಲಾಗಿರುತ್ತದೆ.
- ಟ್ರ್ಯಾಕಷನ್ ಬ್ಯಾಟರಿಯು ಕೂಲೆಂಟ್ ಮೆಕಾನಿಸಂ ಹೊಂದಿರುವ ಲಿ- ಅಯನ್‍ದಾಗಿದ್ದು, ಇದು ಬ್ಯಾಟರಿಯ ತಾಪಮಾನ ನಿಯಂತ್ರಿಸಿ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ.
-ಬಸ್ ತಯಾರಿಕ ಕಂಪನಿಯವರು ತಿಳಿಸಿರುವಂತೆ, ಸದರಿ ಬಸ್ ಪ್ರತಿ ಕಿಮೀ ಆಚರಣೆಗೆ 1.2 ರಿಂದ 1.4 KWH ವಿದ್ಯುತ್‍ಶಕ್ತಿ ಬಳಕೆಯಾಗುತ್ತದೆ.
-ಸುಮಾರು 2 ರಿಂದ 3 ಗಂಟೆಯಲ್ಲಿ ಫಾಸ್ಟ್ ಚಾರ್ಜಿಂಗ್‍ನೊಂದಿಗೆ ಬಸ್ ಅನ್ನು ಚಾರ್ಜ್ ಮಾಡಬಹುದು.