ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ನಂತರ ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ತಿರುವು ಬರಲಿದ್ದು, ವಿದ್ಯಾರ್ಥಿ ಕೇಂದ್ರಿತ ಬೋಧನಾ ವ್ಯವಸ್ಥೆ ಎಲ್ಲೆಡೆ ಅನುಷ್ಠಾನಕ್ಕೆ ಬರಲಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದರು.
ರಾಜಧಾನಿಯಲ್ಲಿ ಮಂಗಳವಾರ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಏರ್ಪಡಿಸಿದ್ದ 13ನೇ ಸಂಸ್ಥಾಪಕರ ದಿನ ಹಾಗೂ ಶ್ರೀ ಬಾಲಗಂಗಾಧರ ಮಹಾಸ್ವಾಮೀಜಿ ಅವರ 76ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಿಸಿಎಂ, ಶಿಕ್ಷಣ ಎಂಬುದು ನಮ್ಮ ಸಮಾಜಕ್ಕೆ ಅತ್ಯಗತ್ಯ ಜೀವಸೆಲೆ ಎಂಬುದನ್ನು ಸರ್ಕಾರ ಮನಗಂಡಿದೆ. ಆ ನಿಟ್ಟಿನಲ್ಲಿಯೇ ನೂತನ ಶಿಕ್ಷಣ ನೀತಿ ಸಿದ್ಧವಾಗಿದ್ದು, ಶ್ರೀ ಮಠದ ಪ್ರೇರಣೆ ಹಾಗೂ ಸ್ವಾಮೀಜಿ ಅವರ ಆಶೀರ್ವಾದಿಂದ ಪರಿಣಾಮಕಾರಿಯಾಗಿ ಜಾರಿ ಮಾಡಲಾಗುವುದು ಎಂದರು.
ಸಮಾಜದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿವೆ. ಎತ್ತ ನೋಡಿದರೂ ಸವಾಲುಗಳೇ ಕಾಣುತ್ತಿವೆ. ನನ್ನ ಪ್ರಕಾರ ಈ ಎಲ್ಲ ಸಮಸ್ಯೆ - ಸವಾಲುಗಳಿಗೆ ನಿಜವಾದ ಸಂಜೀವಿನಿ ಎಂದರೆ ಶಿಕ್ಷಣ ಮಾತ್ರ. ಯಾವುದೇ ವ್ಯಕ್ತಿ ಅಥವಾ ವ್ಯವಸ್ಥೆ ಎದುರಿಸುತ್ತಿರುವ ಆರ್ಥಿಕ, ಸಾಮಾಜಿಕ, ರಾಜಕೀಯ ಇನ್ನಿತರ ಸವಾಲುಗಳಿಗೆ ಗುಣಮಟ್ಟದ ಶಿಕ್ಷಣದಿಂದ ಪರಿಹಾರ ಸಾಧ್ಯವಿದೆ ಎಂದರು. ಈ ಉದ್ದೇಶದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಗುಣಮಟ್ಟದ ಬೋಧನೆ, ಕಲಿಕೆ ಮತ್ತು ಸಂಶೋಧನೆಗೆ ಒತ್ತು ನೀಡಲಾಗಿದೆ. ಈ ನೀತಿಯ ಜಾರಿಯ ನಂತರ ಕರ್ನಾಟಕ ಶೈಕ್ಷಣಿಕ ಕ್ಷೇತ್ರಕ್ಕೆ ಮಹೋನ್ನತ ತಿರುವು ನೀಡಲಿದೆ ಎಂದು ನುಡಿದರು.
ಈ ಸುದ್ದಿಯನ್ನೂ ಓದಿ: ನಮ್ಮ ಮಠ ಕಿಂಗ್ ಮೇಕರ್ ಆಗುತ್ತದೆಯೇ ಹೊರತು ಕಿಂಗ್ ಆಗಲ್ಲ: ಕಾಗಿನೆಲೆ ನಿರಂಜನಾನಂದಪುರಿ ಶ್ರೀ
ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಚಿವ ಸಿ.ಪಿ. ಯೋಗೇಶ್ವರ್ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಮೂವರು ಸಿಬ್ಬಂದಿಗೆ ಸೇವಾರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಬಿಜಿಎಸ್-ಎಸ್‌ಜೆಬಿ ಸಂಸ್ಥೆಗಳು-ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕ ಶಪ್ರಕಾಶನಾಥ ಸ್ವಾಮೀಜಿ ಉಪಸ್ಥಿತರಿದ್ದರು.