ಬೆಂಗಳೂರು: ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಆಡಳಿತ ಮಂಡಳಿಗಳು ಗ್ರಾಮೀಣ ಭಾಗದಲ್ಲಿ ತಲಾ ಒಂದು ಸರ್ಕಾರಿ ಶಾಲೆ ದತ್ತು ಪಡೆದುಕೊಂಡು ಅವರ ಅಧ್ಯಾಪಕರನ್ನೇ ಅಲ್ಲಿಗೆ ಕಳುಹಿಸಿ ಗ್ರಾಮೀಣ ಶಾಲೆಗಳ ಶಿಕ್ಷಣ ಮಟ್ಟ ಸುಧಾರಣೆ ಮಾಡಬೇಕು. ನಾನು ಕೂಡ ಮೂರು ಶಿಕ್ಷಣ ಸಂಸ್ಥೆ ನಡೆಸುತ್ತಿದ್ದು ಮೂರು ಸರ್ಕಾರಿ ಶಾಲೆ ದತ್ತು ಪಡೆದುಕೊಳ್ಳುತ್ತೇನೆ. ಅದರಂತೆ ಪ್ರತಿಯೊಂದು ಶಿಕ್ಷಣ ಸಂಸ್ಥೆಯೂ ಒಂದೊಂದು ಸರ್ಕಾರಿ ಶಾಲೆ ದತ್ತುಪಡೆಯಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ ನೀಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದ ಸಿಎಸ್ಆರ್ ಅನುದಾನ ಕುರಿತು ಸಮಗ್ರ ಶಿಕ್ಷಣ ರಾಜ್ಯ ಯೋಜನಾ ನಿರ್ದೇಶಕರ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಡಿ.ಕೆ.ಶಿವಕುಮಾರ್, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದ ಡಿ.ಕೆ.ಸುರೇಶ್ ಭಾಗವಹಿಸಿದ್ದು, ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಆಯುಕ್ತೆ ಬಿ.ಬಿ.ಕಾವೇರಿ, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ.ರಾಜೇಂದ್ರ ಪ್ರಸಾದ್ ಮತ್ತಿತರರ ಜೊತೆ ಗ್ರಾಮೀಣ ಪ್ರದೇಶದ ಶಾಲೆಗಳ ಶಿಕ್ಷಣ ಗುಣಮಟ್ಟ ಸುಧಾರಣೆ ಕುರಿತು ಚರ್ಚಿಸಿದರು.
ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, "ಸಿಎಸ್‌ಆರ್ ಹಣದ ಮೂಲಕ ನೂತನ ಶಾಲೆಗಳನ್ನು ನಿರ್ಮಾಣ ಮಾಡಬೇಕು ಹಾಗೂ ಸದ್ಬಳಕೆ ಹೇಗೆ ಮಾಡಬೇಕು ಎಂಬುದಾಗಿ ಸರ್ಕಾರ ಯೋಜನೆ ರೂಪಿಸುತ್ತಿದೆ. ನನ್ನದೂ 3 ಶಿಕ್ಷಣ ಸಂಸ್ಥೆಗಳಿದ್ದು ಪಂಚಾಯಿತಿ ಮಟ್ಟದಲ್ಲಿ 3 ಶಾಲೆಗಳನ್ನು ದತ್ತು ತೆಗೆದುಕೊಳ್ಳುತ್ತೇನೆ. ಸಿಎಸ್‌ಆರ್ ಹಣವು ಕೇವಲ ನಗರೀಕರಣಕ್ಕೆ ಮಾತ್ರ ಬಳಕೆಯಾಗುತ್ತಿದೆ. ಇದನ್ನು ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಬಳಕೆ ಮಾಡಬೇಕು ಎಂಬುದು ನಮ್ಮ ಆಶಯ. ಪ್ರತಿ ಪಂಚಾಯಿತಿಯಲ್ಲಿ 3 ಶಾಲೆಗಳನ್ನು ಹೊಸದಾಗಿ ನಿರ್ಮಾಣ ಮಾಡಬೇಕು ಎಂಬುದು ನಮ್ಮ ಕನಸಾಗಿದೆ ಅದಕ್ಕೆ ಹಣದ ಸದ್ಬಳಕೆ ಕುರಿತು ಸಭೆ ನಡೆಸಲಾಯಿತು" ಎಂದು ಮಾಹಿತಿ ನೀಡಿದರು.
"ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅವರ ಶಾಲೆಯ ಅಧ್ಯಾಪಕರನ್ನೇ ಗ್ರಾಮೀಣ ಭಾಗದ ಶಾಲೆಗಳಿಗೆ ಕಳುಹಿಸಿ ಪಾಠ ಮಾಡಬೇಕು. ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನಮ್ಮ ಕರ್ನಾಟಕದ ಪ್ರತಿ ಗ್ರಾಮೀಣ ಮಕ್ಕಳಿಗೂ ದೊರೆಯಬೇಕು ಎಂಬುದು ನಮ್ಮ ಸರ್ಕಾರದ ಮಹತ್ವದ ಯೋಚನೆ ಮತ್ತು ಯೋಜನೆ" ಎಂದು ಹೇಳಿದರು.
ಸಾಮಾಜಿಕ ಹೊಣೆಗಾರಿಕೆ ಸಮಾವೇಶದ ನಿರ್ಣಯ ಜಾರಿ: ಇತ್ತೀಚೆಗಷ್ಟೆ ನಗರದ ಯುಬಿ ಸಿಟಿಯಲ್ಲಿರುವ ಜೆಡಬ್ಲ್ಯೂ ಮಾರಿಯೆಟ್ ಹೋಟೆಲ್ನಲ್ಲಿ ನಡೆದಿದ್ದ ಶಿಕ್ಷಣ ಕುರಿತ ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಸಮಾವೇಶದಲ್ಲಿ ಮಾತನಾಡಿದ್ದ ಡಿ.ಕೆ.ಶಿವಕುಮಾರ್, ನಮ್ಮ ಗ್ರಾಮೀಣ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವಂತೆ ಮಾಡಲು ಪ್ರತಿ ಎರಡು ಪಂಚಾಯಿತಿಗಳನ್ನು ಸೇರಿಸಿ ಪಬ್ಲಿಕ್ ಶಾಲೆ ಆರಂಭಿಸಬೇಕು. ಅದಕ್ಕೆ ಬೇಕಾಗಿರುವ ಜಾಗವನ್ನು ಸರ್ಕಾರದ ವತಿಯಿಂದ ನೀಡುತ್ತೇವೆ. ನೀವು ಅಲ್ಲಿ ಶಾಲಾ ಕಟ್ಟಡ ನಿರ್ಮಾಣ ಮಾಡಿ ಪ್ರಮುಖ ಶಿಕ್ಷಣ ಸಂಸ್ಥೆಗಳು ಸರ್ಕಾರದ ಸಹಯೋಗದಲ್ಲಿ ಈ ಶಾಲೆಗಳ ಜವಾಬ್ದಾರಿ ವಹಿಸಿಕೊಳ್ಳುವಂತೆ ನಾವು ಮಾಡುತ್ತೇವೆ ಎಂದಿದ್ದರು.
ಅದಕ್ಕೆ ಪೂರಕವಾಗಿ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ದತ್ತು ಪಡೆಯುವಂತೆ ಕರೆ ನೀಡಿ ಸಾಮಾಜಿಕ ಹೊಣೆಗಾರಿಕೆ ಸಮಾವೇಶದ ನಿರ್ಣಯ ಜಾರಿಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ರಾಜಕಾರಣ ಎಷ್ಟು ಮಾಡಬೇಕೋ ಅಷ್ಟೇ ಮಾಡಬೇಕು, ನೀರು ಹರಿಸುವ ಬೀಗ ನಮ್ಮ ಬಳಿ ಇದೆಯೇ?: ಡಿಸಿಎಂ ಡಿಕೆಶಿ