ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಪರಿಣಾಮ, ಪ್ರವಾಹದ ಭೀತಿ ಉಂಟಾಗಿದೆ. ಆದರೆ ಮಳೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದರು.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜಕಾಲುವೆ ಹೂಳೆತ್ತುವ ಕಾರ್ಯ ಸಹ ಮಾಡಲಾಗಿದ್ದು, ಕಳೆದ ಬಾರಿ ಮಳೆ ಬಂದಾಗ ದಾಸರಹಳ್ಳಿ ಭಾಗದಲ್ಲಿ ತೊಂದರೆ ಆಗಿತ್ತು. ಆದರೆ ಈ ವರ್ಷ ನಗರದ ತಗ್ಗು ಪ್ರದೇಶಗಳನ್ನು ಗುರುತಿಸಲಾಗಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿಯೂ ಸಭೆಗಳು ನಡೆದಿವೆ. ಗುಂಡಿಗಳು, ತಗ್ಗು ಪ್ರದೇಶ, ರಾಜಕಾಲುವೆ ಎಲ್ಲದರ ಬಗ್ಗೆಯೂ ಗಮನ ಹರಿಸಲಾಗಿದೆ ಎಂದರು.
ಸ್ವಾತಂತ್ರ್ಯ ದಿನಾಚರಣೆಗೆ ಸಿಎಂ ಗೈರು?
ಯಡಿಯೂರಪ್ಪನವರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು ಆಗಸ್ಟ್ 15 ರಂದು ಹೋಂ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಹೀಗಾಗಿ ಭಾಷಣ, ಧ್ವಜಾರೋಹಣ ಎಲ್ಲದರ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
ಐಟಿ ಉದ್ಯಮದ ಮೇಲೆ ಕೊರೊನಾ ಪರಿಣಾಮ:
ಕೊರೊನಾದಿಂದ ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯಮಕ್ಕೆ ಹೆಚ್ಚು ನಷ್ಟ ಉಂಟಾಗಿಲ್ಲ. ವರ್ಕ್ ಫ್ರಂ ಹೋಂ ಮಾಡಲು ಅವಕಾಶ ಕಲ್ಪಿಸಲಾಗಿದೆ. ವಾರ್ಷಿಕ ಲೆಕ್ಕಾಚಾರದಲ್ಲಿ ಉದ್ಯೋಗ ಕಳೆದುಕೊಂಡವರು, ಕಂಪನಿ ನಷ್ಟದ ಬಗ್ಗೆ ಮಾಹಿತಿ ಕೊಡಲಾಗುತ್ತದೆ. ದೊಡ್ಡ ಕಂಪನಿಗಳು ಹೆಚ್ಚು ಸಮಸ್ಯೆ ಎದುರಿಸಿಲ್ಲ. ಹೊಸ ಕಂಪನಿಗಳಿಗೆ ಸ್ವಲ್ಪ ಸಮಸ್ಯೆಯಾಗಿದೆ ಎಂದರು.
ಆಗಸ್ಟ್ 20 ರೊಳಗೆ ಸಿಇಟಿ ಫಲಿತಾಂಶ:
ಆಗಸ್ಟ್ 20 ರೊಳಗೆ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ ಬರಲಿದೆ. ಇಂಜಿನಿಯರ್, ಕಾಲೇಜು ಸೀಟ್ ಹಂಚಿಕೆ ವಿಚಾರ ಒಂದು ವಾರದೊಳಗೆ ತಿಳಿಯಲಿದೆ. ಕೌನ್ಸೆಲಿಂಗ್ ಮೂಲಕವೇ ಶೇಕಡ ನೂರರಷ್ಟು ಸೀಟ್ ಹಂಚಿಕೆ ಮಾಡಬೇಕು ಎಂದರು.
ಶುಲ್ಕ ಕಡಿಮೆ ಮತ್ತು ಜಾಸ್ತಿ ಮಾಡುವ ಕುರಿತು ಸಂಬಂಧಪಟ್ಟ ಸಂಸ್ಥೆ ತೀರ್ಮಾನ ಮಾಡಲಿದೆ ಎಂದರು.