ಬೆಂಗಳೂರು: ವಿದ್ಯಾರ್ಥಿಗಳು ಕಾಲೇಜಿಗೆ ಬಾರದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥ ನಾರಾಯಣ, ಎಲ್ಲಾ ಕೋವಿಡ್ ಮಾರ್ಗಸೂಚಿಗಳ ಅನ್ವಯ ಕಾಲೇಜು ಆರಂಭಿಸಿದ್ದೇವೆ. ಎಲ್ಲಾ ಸುರಕ್ಷತಾ ಕ್ರಮ ಕೈಗೊಂಡಿದ್ದೇವೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಬಹುದು ಎಂದರು.
ಕಾಲೇಜಿಗೆ ಬರಲೇಬೇಕೆಂಬ ಒತ್ತಾಯ ವಿದ್ಯಾರ್ಥಿಗಳಿಗೆ ಇಲ್ಲ. ಆದ್ರೆ ವಿದ್ಯಾರ್ಥಿಗಳು ಬರುವಲ್ಲಿ ಆರಂಭದಲ್ಲಿ ಹಿನ್ನಡೆ ಆಗಿದೆ. ಆಫ್ ಲೈನ್ ಮೂಲಕ ಬರದವರಿಗೆ ಆನ್ಲೈನ್ ತರಗತಿಗಳು ನಡೆಸಲಾಗ್ತಿದೆ. ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬರುವುದು ಕಡ್ಡಾಯ. ನೆಗೆಟಿವ್ ವರದಿ ತಂದು ವಿದ್ಯಾರ್ಥಿಗಳು ಕಾಲೇಜಿಗೆ ಬರಬಹುದು ಎಂದು ಹೇಳಿದರು.
ಸರ್ಕಾರ, ಶಿಕ್ಷಣ ಸಂಸ್ಥೆಗಳಿಂದ ಲೋಪ ಬರಬಾರದು. ಸುರಕ್ಷತಾ ಕ್ರಮ ಕೈಗೊಂಡಿದ್ದೇವೆ. ವಿದ್ಯಾರ್ಥಿಗಳಿಗೆ ಟೆಸ್ಟಿಂಗ್ ರಿಸಲ್ಟ್ ಬೇಗನೇ ಸಿಗ್ತಿದೆ. ಮಾಲ್ಗಳಲ್ಲಿ ಹಾಗೂ ಇತರೆ ಸಾರ್ವಜನಿಕ ಕ್ಷೇತ್ರದಲ್ಲಿ ಅನ್ಲಾಕ್ ಆದ ಪ್ರಾರಂಭದಲ್ಲಿ ಜನರ ಸಂಖ್ಯೆ ವಿರಳವಾಗಿತ್ತು. ಈಗ ಸರಿ ಹೋಗಿದೆ. ಅದೇ ರೀತಿ ಕಾಲೇಜಿನಲ್ಲೂ ಆಗಲಿದೆ ಎಂದರು.