ಬೆಂಗಳೂರು : ಶಿಕ್ಷಕರ ಕ್ಷೇತ್ರದ ಚುನಾವಣೆ ಶಿಕ್ಷಕರು ಸದೃಢರಾಗಲು ಮತ್ತು ಸಬಲೀಕರಣಕ್ಕಾಗಿ ಸಹಕಾರಿ ಎಂದು ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಹೇಳಿದರು.
ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಮಲ್ಲೇಶ್ವರಂನ ಸರ್ಕಾರಿ ಶಾಲೆಯ ಆವರಣಕ್ಕೆ ಅವರು ಭೇಟಿ ನೀಡಿದರು. ಆರಂಭದಲ್ಲಿ ಮತದಾರರು ಮತ ಚಲಾವಣೆಗೆ ಬಾರದ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, ಕೊರೊನಾ ಮುಂಜಾಗೃತಾ ಕ್ರಮಗಳನ್ನ ಚುನಾವಣಾ ಆಯೋಗ ಕೈಗೊಂಡಿದ್ದು, ಯಾವುದೇ ಆತಂಕವಿಲ್ಲದೆ ಬಂದು ಮತ ಚಲಾಯಿಸಿ ಎಂದು ಶಿಕ್ಷಕರಿಗೆ ಮನವಿ ಮಾಡಿದರು.
ಶಿಕ್ಷಕರ ಕ್ಷೇತ್ರ ವಿಶೇಷವಾಗಿದೆ. ಈ ರೀತಿ ಇಂಜಿನಿಯರ್ ಅಥವಾ ಬೇರೆ ಯಾವುದೇ ವಲಯಕ್ಕೆ ತಮ್ಮ ಪ್ರತಿನಿಧಿ ಆರಿಸುವ ಅವಕಾಶವಿಲ್ಲ. ಇದು ಕೇವಲ ಶಿಕ್ಷಕರ ಕ್ಷೇತ್ರಕ್ಕೆ ಮಾತ್ರ. ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳು ಉತ್ತಮ ರೀತಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಿರುವ ಸುಧಾರಣೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತಾರೆ. ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡಲು ಇದು ಅವಕಾಶ ಎಂದರು.