ಬೆಂಗಳೂರು: ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ವಿಚಾರ ಕಳೆದ ಒಂದು ವಾರದಿಂದ ಸದ್ದು ಭಾರಿ ಮಾಡ್ತಿದೆ. ಆದ್ರೆ ಈ ಬಗ್ಗೆ ತಮಗೆ ಮಾಹಿತಿಯೇ ಇಲ್ಲ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ, ಸಚಿವರಾದ ಜಗದೀಶ್ ಶೆಟ್ಟರ್ ಹಾಗು ಎಂ.ಟಿ.ಬಿ. ನಾಗರಾಜ್ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ನಾಯಕತ್ವ ಬದಲಾವಣೆ ಬಗ್ಗೆ ನಮಗೆ ಯಾರೂ ಅಧಿಕೃತವಾಗಿ ಹೇಳಿಲ್ಲ. ನನಗೆ ಈ ಬಗ್ಗೆ ಏನೂ ಮಾಹಿತಿ ಇಲ್ಲ. ಹೈಕಮಾಂಡ್ ಮಟ್ಟದಲ್ಲಿ ಏನು ಚರ್ಚೆಯಾಗಿದೆ ಎನ್ನುವುದು ಗೊತ್ತಿಲ್ಲ. ಒಂದಕ್ಕೊಂದು ನೀವೇ ಸೃಷ್ಟಿ ಮಾಡ್ತಿದ್ದೀರಿ ಎಂದು ಮಾಧ್ಯಮದವರ ಮೇಲೆಯೇ ಗರಂ ಆದ್ರು.
ನಾನು ಹೈಕಮಾಂಡ್ ಭೇಟಿ ಮಾಡಲು ಹೋಗಿಯೇ ಇಲ್ಲ. ಕೈಗಾರಿಕಾ ಇಲಾಖೆ ಕೆಲಸಕ್ಕೆ ಹೋಗಿದ್ದೆ. ಆದರೆ, ಹೋದರೆ ಎಂಬ ಪ್ರಶ್ನೆಗಳಿಗೆ ನಾನು ಉತ್ತರಿಸುವುದಿಲ್ಲ. ನಾಯಕತ್ವ ಬದಲಾವಣೆ ಇಲ್ಲವೆಂದು ನಮ್ಮ ಉಸ್ತುವಾರಿಯೇ ಹೇಳಿದ್ದರು. ನಿರ್ದಿಷ್ಟವಾಗಿ ಹೈಕಮಾಂಡ್ ಸೂಚನೆ ನೀಡುವುದಿಲ್ಲವೋ ಅಲ್ಲಿಯವರೆಗೆ ಚರ್ಚೆ ಮಾಡುವ ಅಗತ್ಯವಿಲ್ಲ ಎಂದರು.
ನಳಿನ್ ಕುಮಾರ್ ಕಟೀಲ್ ಆಡಿಯೋ ಬಗ್ಗೆಯೇ ಅನುಮಾನವಿದೆ. ಅದರ ಬಗ್ಗೆ ಸಿಎಂ ತನಿಖೆ ಮಾಡಿಸುತ್ತಾರೆ. ಅದು ಕಟೀಲ್ ಆಡಿಯೋ ಆಗಿದ್ದರೆ ಅದು ಬೇರೆ ಸಂಗತಿ ಎಂದು ತಿಳಿಸಿದರು.
ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಮಾತನಾಡಿ, ಸಿಎಂ ಯಾವ ಹಿನ್ನೆಲೆಯಲ್ಲಿ ಹೇಳಿಕೆ ಕೊಟ್ಟಿದ್ದಾರೆ ಗೊತ್ತಿಲ್ಲ. ಸದ್ಯಕ್ಕೆ ನಮ್ಮ ಸಿಎಂ ಯಡಿಯೂರಪ್ಪ. ಸಿಎಂ ಹೇಳಿಕೆ ಬಗ್ಗೆ ಅವರನ್ನೇ ಕೇಳಬೇಕು. ಯಾವುದೇ ನಾಯಕತ್ವ ಬದಲಾವಣೆ ಚರ್ಚೆ ಇಲ್ಲ. ಸಿಎಂ ಸ್ಥಾನ ಖಾಲಿ ಇಲ್ಲ ಎಂದರು.
ಸಚಿವ ಎಂ.ಟಿ.ಬಿ. ನಾಗರಾಜ್ ಮಾತನಾಡಿ, ಸಿಎಂ ಹೇಳಿದ ಮೇಲೆ ಇನ್ನೇನಿದೆ. ನಮಗೇನೂ ಆತಂಕ ಇಲ್ಲ. ಸಿಎಂ, ಹೈಕಮಾಂಡ್ ಏನೇ ತೀರ್ಮಾನ ತಗೆದುಕೊಂಡರು ನಾವು ಬದ್ಧ. ಅವರು ನಮ್ಮನ್ನು ಕೈ ಬಿಡುತ್ತೇವೆ ಎಂದರೆ ಏನು ಮಾಡುವುದಕ್ಕೆ ಆಗುತ್ತದೆ. ನಮಗೆ ಏನೂ ಆತಂಕ ಇಲ್ಲ. ನಾವು ಸಮಾನಾಂತರವಾಗಿದ್ದೇವೆ. ಪಕ್ಷದಲ್ಲಿ ಏನೇ ನಿಯಮ ಬಂದರೂ ಪಾಲನೆ ಮಾಡಬೇಕಾಗುತ್ತದೆ ಎಂದು ಹೇಳಿದ್ರು.
ಸಚಿವ ಎಸ್. ಅಂಗಾರ ಮಾತನಾಡಿ, ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ಸಿಎಂ ಅದರ ಬಗ್ಗೆ ತೀರ್ಮಾನಿಸುತ್ತಾರೆ. ನಾಯಕತ್ವ ಬದಲಾವಣೆ ಅಭ್ಯಂತರದ ಪ್ರಶ್ನೆಯೇ ಬರುವುದಿಲ್ಲ. ಪಕ್ಷದ ತೀರ್ಮಾನ ಇರುತ್ತದೆ. ಅದರ ಬಗ್ಗೆ ನಾನು ಮಾತನಾಡಲು ಬರುವುದಿಲ್ಲ. ಪಕ್ಷದ ತೀರ್ಮಾನಕ್ಕೆ ನಾವು ಬದ್ಧ ಎಂದು ಹೇಳಿದರು.
ಸಚಿವ ಆರ್. ಅಶೋಕ್ ಪ್ರತಿಕ್ರಿಯೆ ನೀಡಿ, ಸಿಎಂ ಇಂದು ಏನು ಹೇಳಿದ್ದಾರೋ ಅದಕ್ಕೆ ನಮ್ಮ ಸಹಮತ ಇದೆ. ನಮ್ಮದು ರಾಷ್ಟ್ರೀಯ ಪಕ್ಷ. ಹೈಕಮಾಂಡ್ ಸೂಚನೆಯಂತೆ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ. ಈವರೆಗೂ ಹೈಕಮಾಂಡ್ನಿಂದ ಯಾವುದೇ ಸಂದೇಶ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಜು.26 ರಂದು ಯಡಿಯೂರಪ್ಪ ಅವರು ಹೇಳಿದ ಹಾಗೆ ಕೇಂದ್ರದ ನಾಯಕರ ಜೊತೆ ಚರ್ಚಿಸುತ್ತಾರೆ. ಕೇಂದ್ರ ಏನೇ ಹೇಳಿದರೂ ಸಿಎಂ ಹಾಗೂ ನಾವು ತಲೆ ಬಾಗುತ್ತೇವೆ. ನಿಮಗೆ ಬೇಸರ ಆಗುತ್ತಿಲ್ಲವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಸಂಭ್ರಮದಲ್ಲಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯದ ಮುಂದಿನ ಸಿಎಂ ರೇಸ್ನಲ್ಲಿ ಸಂತೋಷ್, ಜೋಶಿ ಸೇರಿ ಹಲವರ ಹೆಸರು