ಬೆಂಗಳೂರು: ದಿನದಿಂದ ದಿನಕ್ಕೆ ಮಹಾಮಾರಿಯ ಪ್ರಭಾವ ಹೆಚ್ಚಾಗುತ್ತಿದ್ದು, ಪೊಲೀಸರಲ್ಲಿ ಸೋಂಕಿನ ಪ್ರಮಾಣ ವೇಗವಾಗಿ ಹರಡುತ್ತಿದೆ.
ನಗರದಲ್ಲಿ ಕೊರೊನಾ ಶುರುವಾಗಿನಿಂದ ಇಲ್ಲಿಯವರೆಗೆ ಸುಮಾರು 347 ಪೊಲೀಸರಿಗೆ ಸೋಂಕು ತಗುಲಿದ್ದು, ನಿನ್ನೆ ಒಂದೇ ದಿನ 55 ಜನ ಅಧಿಕಾರಿಗಳಲ್ಲಿ ಪಾಸಿಟಿವ್ ಬಂದಿದೆ. ಇದುವರೆಗೆ 126 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 5 ಮಂದಿ ಸಾವನ್ನಪ್ಪಿದ್ದಾರೆ. ಅದರಂತೆ ಸೋಂಕಿತರ ಸಂಪರ್ಕದಲ್ಲಿರುವ ಸುಮಾರು 737 ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, 29 ಪೊಲೀಸ್ ಠಾಣೆಗಳನ್ನು ಸೀಲ್ಡೌನ್ ಮಾಡಲಾಗಿದೆ.
ಅನಿವಾರ್ಯ ಅನ್ನೋ ಹಾಗೆ ಕೆಲಸ ಮಾಡುತ್ತಿರುವ ಖಾಕಿ ಪಡೆ:
ಕೇವಲ ನಗರದಲ್ಲಿ ಮಾತ್ರವಲ್ಲದೆ ರಾಜ್ಯಾದ್ಯಂತ ಸೋಂಕಿನ ಪ್ರಮಾಣ ಎಲ್ಲೆಡೆ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಭದ್ರತೆಯ ದೃಷ್ಟಿಯಿಂದ ಗಸ್ತು ತಿರುಗುವುದು, ಮಾಸ್ಕ್ ಹಾಕದೆ ಇರುವವರಿಗೆ ಕೊರೊನಾ ಸೊಂಕಿನ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ಸಾಮಾಜಿಕ ಹಿತದೃಷ್ಠಿಯಿಂದ ಜನರ ರಕ್ಷಣೆ ಮಾಡುವ ಹೊಣೆ ಪೊಲೀಸ್ ಇಲಾಖೆ ಮೇಲಿದೆ.
ಹಿರಿಯ ಅಧಿಕಾರಿಗಳಿಂದ ಸಿಬ್ಬಂದಿಗೆ ಆತ್ಮಸ್ಥೆರ್ಯ:
ಪೊಲೀಸ್ ಅಧಿಕಾರಿಗಳಿಗೆ ಸೋಂಕು ದೃಢಪಡುತ್ತಿದ್ದಂತೆ ಅವರ ಸಂಪರ್ಕದಲ್ಲಿದ್ದ ಠಾಣೆಯ ಇತರೆ ಸಿಬ್ಬಂದಿ ಭಯ ಪಡುತ್ತಿದ್ದು, ಅಂತವರಿಗೆ ಹಿರಿಯ ಅಧಿಕಾರಿಗಳು ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.