ಬೆಂಗಳೂರು: ಜಾರಿ ನಿರ್ದೇಶನಾಲಯವು (ಇಡಿ) ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರನ್ನ ಬಂಧಿಸಿರುವ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡ್ತಿದ್ದಾರೆ. ಅದರಲ್ಲೂ ಡಿಕೆಶಿ ಹುಟ್ಟೂರಾದ ಕನಕಪುರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿರಾಜು ದಕ್ಷಿಣ ವಲಯ ವ್ಯಾಪ್ತಿಯ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆ. ಕೇಂದ್ರ ವಲಯ ವ್ಯಾಪ್ತಿಯ ರಾಮನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಂದೋಬಸ್ತ್ ಕಲ್ಪಿಸಲು ಎರಡು ವಲಯ ಐಜಿಪಿಗಳಿಗೆ ಸೂಚನೆ ನೀಡಿದ್ದಾರೆ.
ಇಂದು ಕೂಡ ಹಲವಡೆ ಪ್ರತಿಭಟನೆಗಳು ನಡೆದು ರಸ್ತೆ ತಡೆ, ಅಂಗಡಿ ಮುಗ್ಗಟ್ಟು ಬಂದ್ ಮಾಡುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಬಂದೋಬಸ್ತ್ ಕಲ್ಪಿಸಿ, ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ನಿಗಾ ಇಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇನ್ನು ಸಿಲಿಕಾನ್ ಸಿಟಿಯಲ್ಲಿ ಕೂಡ ಇಂದು ಪ್ರತಿಭಟನೆ ನಡೆಯುವ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಜಾಗೃತರಾಗಿ ಇರುವಂತೆ ಸೂಚಿಸಿದ್ದಾರೆ. ಹೀಗಾಗಿ ಸಿಟಿಯ ಡಿಸಿಪಿ, ಇನ್ಸ್ಪೆಕ್ಟರ್, ಸಿಬ್ಬಂದಿ ಅಲರ್ಟ್ ಆಗಿರುವಂತೆ ಸೂಚಿಸಿದ್ದಾರೆ.
ನಗರ ಇಡಿ ಕಚೇರಿ, ಸಿಎಂ ನಿವಾಸಕ್ಕೆ ಬಿಗಿ ಭದ್ರತೆ:
ನಗರ ಪೊಲೀಸರ ಸೂಚನೆ ಹಿನ್ನೆಲೆ ಸಾರ್ವಜನಿಕ ಆಸ್ತಿ, ಪಾಸ್ತಿ ಹಾಗೂ ಶಾಂತಿನಗರ ಇಡಿ ಕಚೇರಿ, ಸಿಎಂ ಬಿಎಸ್ವೈ ನಿವಾಸ, ಭಾರತೀಯ ಜನಾತ ಪಾರ್ಟಿ ಕಚೇರಿಗೆ ಕಲ್ಲು ತೂರಾಟ ಮಾಡುವ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಸೂಚನೆ ಮೇರೆಗೆ ಡಿಸಿಪಿಗಳು ಭದ್ರತೆ ವಹಿಸಿದ್ದಾರೆ.
ಇನ್ನು ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದ ಮೇಲ್ಭಾಗ ಇರುವ ಇಡಿ ಕಚೇರಿಗೆ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಡಿಕೆಶಿ ಬೆಂಬಲಿಗರು ಪ್ರತಿಭಟನೆ ನಡೆಸುವ ಸಾಧ್ಯತೆ ಇದ್ದು, ಸಿಎಆರ್ ತುಕಡಿ ಮತ್ತು ವಿಲ್ಸನ್ ಗಾರ್ಡನ್ ಪೊಲೀಸರ ನಿಯೋಜನೆ ಮಾಡಲಾಗಿದೆ.
ಅಷ್ಟು ಮಾತ್ರವಲ್ಲದೇ ಸಿಎಂ ಬಿಎಸ್ವೈ ನಿವಾಸಕ್ಕೆ ಭಾರೀ ಭದ್ರತೆಯನ್ನ ಕೂಡ ನೀಡಲಾಗಿದೆ. ಬಿಎಸ್ವೈ ಮನೆ ಮುಂದೆ 1 ಕೆಎಸ್ಆರ್ಪಿ ತುಕಡಿ, 25 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹಾಗೆ ಏಳು ವಿಭಾಗದ ಡಿಸಿಪಿಗಳು ಅಲರ್ಟ್ ಆಗಿರುವಂತೆ ಸೂಚನೆ ನೀಡಲಾಗಿದೆ.