ಬೆಂಗಳೂರು: ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಬೃಹತ್ ಸೈಕಲ್ ಜಾಥಾಗೆ ಕೆಪಿಸಿಸಿ ಕಚೇರಿ ಮುಂಭಾಗ ಚಾಲನೆ ದೊರೆಯಿತು. ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಮುಂಭಾಗ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ ಹಾಗೂ ಅಹ್ಮದ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಸೈಕಲ್ ಏರಿ ಮೆರವಣಿಗೆ ನಡೆಸಿದ್ದಾರೆ.
ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯ್ತು. ಪ್ರಧಾನಿ ನರೇಂದ್ರ ಮೋದಿ ಮುಖವಾಡ ಧರಿಸಿದ ವ್ಯಕ್ತಿ ಸೈಕಲ್ ತುಳಿದದ್ದು ಗಮನ ಸೆಳೆಯಿತು. ಇನ್ನೊಂದೆಡೆ ಕುದುರೆ ಟಾಂಗಾ ಮೆರವಣಿಗೆಯಲ್ಲಿ ಕಂಡು ಬಂತು. ಸಾಕಷ್ಟು ಸಂಖ್ಯೆಯಲ್ಲಿ ಯುವಕರು ಹಾಗೂ ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಸೈಕಲ್ ಜಾಥಾಗೆ ಚಾಲನೆ ನೀಡುವುದಕ್ಕೂ ಮುನ್ನ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ ಹಾಗೂ ಸಲೀಂ ಅಹ್ಮದ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನಗತ್ಯವಾಗಿ ಬೆಲೆ ಏರಿಕೆ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ರೀತಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೈಕಲ್ ಜಾಥಾ ನಡೆಸಿದ್ದು, ಸಾಮಾಜಿಕ ಅಂತರ ಅಷ್ಟಾಗಿ ಪಾಲನೆಯಾಗದಿದ್ದುದು ಕಂಡುಬಂತು. ಕಾಂಗ್ರೆಸ್ ಕಾರ್ಯಕರ್ತರು ಮಾರ್ಗದುದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಹಳೆ ಊದಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.
ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಿಂದ ಕ್ಲೀನ್ಸರ್ ರಸ್ತೆಯ ಮಾರ್ಗವಾಗಿ ಸಾಗಿದ ಕಾರ್ಯಕರ್ತರನ್ನು ಇಂಡಿಯನ್ ಎಕ್ಸ್ಪ್ರೆಸ್ ವೃತ್ತದ ಸಮೀಪ ತಡೆಯಲು ಪೊಲೀಸರು ಸಿದ್ಧತೆ ನಡೆಸಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಕ್ವೀನ್ಸ್ ರಸ್ತೆಯಿಂದ ತಮಗೆ ಕಾರ್ಪೊರೇಷನ್ ವೃತ್ತದವರೆಗೂ ಸೈಕಲ್ ಜಾಥಾ ನಡೆಸಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.