ಬೆಂಗಳೂರು: ದೇಶದಲ್ಲಿ ಸೈಬರ್ ಸುರಕ್ಷತೆಯಲ್ಲಿ ಎದುರಾಗಿರುವ ಮಾನವ ಸಂಪನ್ಮೂಲ ಕೊರತೆ ಇದೀಗ ದೊಡ್ಡ ಚರ್ಚೆಯ ವಿಚಾರವಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ವಂಚನೆ ಪ್ರಕರಣಗಳನ್ನು ಭೇದಿಸುವಲ್ಲಿ ವಿಫಲವಾಗುತ್ತಿರುವುದಕ್ಕೆ ಇದೊಂದು ಪ್ರಮುಖ ಕಾರಣವಾಗಿರುವುದು ವಿಪರ್ಯಾಸ. ಸೈಬರ್ ಭದ್ರತೆಯು ಜಗತ್ತಿನಾದ್ಯಂತ ವ್ಯಕ್ತಿಗಳು, ಕಾರ್ಪೊರೇಟ್‌ಗಳು ಮತ್ತು ಸರ್ಕಾರಗಳು ಇತ್ತೀಚಿನ ದಿನಗಳಲ್ಲಿ ಎದುರಿಸುತ್ತಿರುವ ಸಾಮಾನ್ಯ ಸವಾಲು ಆಗಿದೆ. ಎಲ್ಲ ಹಂತಗಳಲ್ಲಿ ಅದನ್ನು ನಿಭಾಯಿಸಲು ನುರಿತ ಜನರ ಕೊರತೆಯಿಂದಾಗಿ ಪರಿಸ್ಥಿತಿಯು ಮತ್ತಷ್ಟು ಉಲ್ಬಣಗೊಂಡಿದೆ.
ಇಂಟರ್ನ್ಯಾಷನಲ್ ಇನ್ಫಾರ್ಮೇಶನ್ ಸಿಸ್ಟಮ್ ಸೆಕ್ಯುರಿಟಿ ಸರ್ಟಿಫಿಕೇಶನ್ ಕನ್ಸೋರ್ಟಿಯಂ ನಡೆಸಿದ ಸಂಶೋಧನೆಯ ಪ್ರಕಾರ, ಅಂದಾಜು ಜಾಗತಿಕವಾಗಿ ಸುಮಾರು 3 ಮಿಲಿಯನ್ ಸೈಬರ್ ಸೆಕ್ಯುರಿಟಿ ವೃತ್ತಿಪರರ ಕೊರತೆಯಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದೆ.
ರಾಜ್ಯದ ನಿವೃತ್ತ ಡಿಜಿಪಿಗೂ ಗಾಳ: ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಶಂಕರ್ ಬಿದರಿ ಅವರು ಸೈಬರ್ ವಂಚಕರ ಮಾತು ನಂಬಿ 89 ಸಾವಿರ ರೂಪಾಯಿ ಕಳೆದುಕೊಂಡಿದ್ದರು. 2021 ರ ಫೆಬ್ರವರಿಯಲ್ಲಿ ಶಂಕರ್ ಬಿದರಿ ಅವರ ಇ-ಮೇಲ್ ಹ್ಯಾಕ್ ಮಾಡಿ ಅವರ ಸ್ನೇಹಿತರಿಂದ 25 ಸಾವಿರ ರೂಪಾಯಿ ವರ್ಗಾವಣೆ ಮಾಡಿಸಿಕೊಂಡಿದ್ದ ಪ್ರಕರಣ ನಡೆದಿತ್ತು. ಬಿದರಿ ಅವರ ಬ್ಯಾಂಕ್ ಖಾತೆಯಿಂದ ಹಣ ಎಗರಿಸಲಾಗಿತ್ತು. ನಿಮ್ಮ ಬ್ಯಾಂಕ್ ಖಾತೆಯ ಪ್ಯಾನ್ ಸಂಖ್ಯೆಯನ್ನು ನವೀಕರಣ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆ ನಿಷ್ಕ್ರಿಯವಾಗುತ್ತದೆ ಎಂಬ ಸೈಬರ್ ವಂಚಕರ ಕರೆಯನ್ನು ನಂಬಿದ್ದ ಶಂಕರ್ ಬಿದರಿ, ಮೊಬೈಲ್ ಫೋನ್‌ಗೆ ಬಂದ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ನೀಡಿದ್ದರು.
ಹಣ ವಂಚನೆ ಬಳಿಕ ಅವರಿಗೆ ವಾಸ್ತವ ಅರಿವಾಗಿತ್ತು. ಇದಾದ ಬಳಿಕ ಪಶ್ಚಿಮ ಬಂಗಾಳದ ಮೂಲದ ವಂಚಕನಿಂದ ಹಣ ವಸೂಲು ಮಾಡಲಾಗಿದೆ. ಆದರೆ ಈಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚಾಗಿದ್ದು, ಇದರ ತನಿಖೆಗೆ ತಗಲುವ ದುಬಾರಿ ವೆಚ್ಚದ ಹಿನ್ನೆಲೆ ಸೂಕ್ತ ತನಿಖೆ ಸಹ ಸಾಧ್ಯವಾಗುತ್ತಿಲ್ಲ. ವಂಚನೆಗೆ ಉಳ್ಳವರು, ಇಲ್ಲದವರು ಎನ್ನುವ ಬೇಧ ಇಲ್ಲದಂತಾಗಿದೆ.
ಡಿಜಿಟಲ್ ಆರ್ಥಿಕತೆ 11 ಟ್ರಿಲಿಯನ್ ಯುಎಸ್ ಡಾಲರ್: ದೇಶ ಅಭಿವೃದ್ಧಿ ಸಾಧಿಸಿದಂತೆ ಸವಲತ್ತುಗಳ ಅಭಿವೃದ್ಧಿ ಹೆಚ್ಚಾಗಿದೆ. ಡಿಜಿಟಲ್ ಆರ್ಥಿಕತೆಯು ಜಾಗತಿಕವಾಗಿ 11.5 ಟ್ರಿಲಿಯನ್ ಯುಎಸ್ ಡಾಲರ್ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ. ಇದು ಜಾಗತಿಕ ಜಿಡಿಪಿ ಯ 15.5% ಗೆ ಸಮನಾಗಿದೆ. ಇದು ಕಳೆದ 15 ವರ್ಷಗಳಲ್ಲಿ ಜಾಗತಿಕ ಜಿಡಿಪಿಗಿಂತ ಎರಡೂವರೆ ಪಟ್ಟು ವೇಗವಾಗಿ ಬೆಳೆದಿದೆ.
ಸೈಬರ್ ಅಪರಾಧ ಪ್ರಕರಣ ಹೆಚ್ಚಳ: ಜಗತ್ತಿನಲ್ಲಿ ದುರದೃಷ್ಟವಶಾತ್ ಸೈಬರ್ ಅಪರಾಧಗಳು ಸಹ ಡಿಜಿಟಲ್ನೊಂದಿಗೆ ಶಾಶ್ವತ ಸ್ಥಾನ ಪಡೆದುಕೊಂಡಿದೆ. ಪ್ರಮುಖ ಡಿಜಿಟಲ್ ಅಪರಾಧಗಳೆಂದರೆ ಫಿಶಿಂಗ್ ಸ್ಕ್ಯಾಮ್‌ಗಳು, ಪಾವತಿ ಮಾಡದಿರುವ, ವಿತರಣೆ ಮಾಡದಿರುವ ಸ್ಕ್ಯಾಮ್‌ಗಳು ಮತ್ತು ಸುಲಿಗೆ, ಈ ಸಂದರ್ಭದಲ್ಲಿ ಸೈಬರ್ ಸೆಕ್ಯುರಿಟಿ ವೃತ್ತಿಪರರು ತಮ್ಮ ಪ್ರಪಂಚವನ್ನು ಸುರಕ್ಷಿತವಾಗಿಡಲು ಸಹಾಯ ಮಾಡುತ್ತಾರೆ. ಆದರೆ ಇಲ್ಲಿಯೂ ಎದುರಾಗಿರುವ ಕೊರತೆ ಇನ್ನಷ್ಟು ಆತಂಕ ಮೂಡಿಸುತ್ತಿದೆ.
ಸೈಬರ್ ಸೆಕ್ಯುರಿಟಿ ವೃತ್ತಿಪರರು ಸಂರಕ್ಷಕರು: ಸೈಬರ್ ಸೆಕ್ಯುರಿಟಿಯಲ್ಲಿ ವೃತ್ತಿಜೀವನವನ್ನು ಕಲ್ಪಿಸಿಕೊಳ್ಳುವುದು ಕಷ್ಟವಾದರೂ, ಪೊಲೀಸ್ ಅಧಿಕಾರಿಗಳು ಸಮಾಜವನ್ನು ರಕ್ಷಿಸುವಂತೆ ಸೈಬರ್ ಸೆಕ್ಯುರಿಟಿ ವೃತ್ತಿಪರರು ಡಿಜಿಟಲ್ ಜಗತ್ತನ್ನು ಸೈಬರ್ ಕ್ರೈಮ್‌ನಿಂದ ರಕ್ಷಿಸುತ್ತಾರೆ. ಉದ್ಯೋಗ ಮಾರುಕಟ್ಟೆಯಲ್ಲಿನ ಕೌಶಲ-ಅಂತರವನ್ನು ಕಡಿಮೆ ಮಾಡಲು, ಬೆಂಗಳೂರು ಮೂಲದ ಪ್ರಮುಖ ಭಾರತೀಯ-ಬಹುರಾಷ್ಟ್ರೀಯ ಸೈಬರ್ ಸೆಕ್ಯುರಿಟಿ ಉತ್ಪನ್ನಗಳು ಮತ್ತು ಸೇವೆಗಳ ಸಂಸ್ಥೆಯಾದ ಸೆಕ್ಯೂರ್ ಐಸ್ ಆನ್‌ಲೈನ್ ಕೌಶಲ ಅಭಿವೃದ್ಧಿ ಕೋರ್ಸ್ ಸೆಕ್ಯೂರ್‌ಐಸ್ ಸೈಬರ್ ಸೆಕ್ಯುರಿಟಿ ಪ್ರಮಾಣೀಕರಣ ಕಾರ್ಯಕ್ರಮವನ್ನು ನಡೆಸುತ್ತಿದೆ.
ಸೈಬರ್ ಸೆಕ್ಯುರಿಟಿಯ ಬಗ್ಗೆ ಆಸಕ್ತಿ ಹೊಂದಿರುವ ಮತ್ತು ತಮ್ಮ ಪದವಿಯನ್ನು ಪೂರ್ಣಗೊಳಿಸಿದ ಅಥವಾ ಅಂತಿಮ ವರ್ಷ,ಸೆಮಿಸ್ಟರ್‌ನಲ್ಲಿರುವ ಅಭ್ಯರ್ಥಿಗಳು ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು. ನೀವು ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿದ್ದರೆ ಲಿಂಗ, ವಯಸ್ಸು, ದೈಹಿಕ, ಸಾಮಾಜಿಕ, ಆರ್ಥಿಕ ಸವಾಲುಗಳು ಅಡ್ಡಿಯಾಗುವುದಿಲ್ಲ.
ತರಗತಿಯ ಅವಧಿ ಮುಗಿದ ನಂತರ ವಿದ್ಯಾರ್ಥಿಗಳು ಲೈವ್ ಪ್ರಾಜೆಕ್ಟ್‌ಗಳಲ್ಲಿ 6-ತಿಂಗಳ ಕೆಲಸದ ತರಬೇತಿಯನ್ನು ಪಡೆಯುತ್ತಾರೆ ಎಂದು ಸೆಕ್ಯೂರ್‌ಐಸ್ ನ ವ್ಯಾಪಾರ ಆಚರಣೆ ವಿಭಾಗದ ಮುಖ್ಯಸ್ಥೆ ಉಮಾ ಪಂಡ್ಯಾಲ ಅಭಿಪ್ರಾಯಪಟ್ಟಿದ್ದಾರೆ.
ಸೆಕ್ಯೂರ್ ಐಸ್ ಆನ್‌ಲೈನ್ ಕೋರ್ಸ್: ಇನ್ನು ಸಂಸ್ಥೆಯ ಸಿಬ್ಬಂದಿ ವಿಭಾಗದ ಮುಖ್ಯಸ್ಥೆ ವಸಂತ ಕೃಷ್ಣಮೂರ್ತಿ ಪ್ರಕಾರ ಅಸುರಕ್ಷಿತ ವಾತಾವರಣದಲ್ಲಿ ಪ್ರಗತಿ ಸಾಧ್ಯವಿಲ್ಲ. ಸೈಬರ್ ಸೆಕ್ಯುರಿಟಿ ವೃತ್ತಿಪರರು ವ್ಯಕ್ತಿಗಳು, ವ್ಯವಹಾರಗಳು ಮತ್ತು ಸರ್ಕಾರಗಳ ಭಾವನಾತ್ಮಕ ಮತ್ತು ದೈಹಿಕ ಸುರಕ್ಷತೆಗೆ ಪ್ರಮುಖ ಲಿಂಕ್ ಆಗಿರುತ್ತಾರೆ. ಇದು ಬಹು ದೊಡ್ಡ ಕೆಲಸವಾಗಿದೆ, ಉದ್ಯೋಗ ಸಾಕಷ್ಟು ಪ್ರಮಾಣದ ತೃಪ್ತಿಯನ್ನೂ ಒದಗಿಸುತ್ತದೆ ಎಂದು ವಿವರಿಸಿದ್ದಾರೆ. ಒಟ್ಟಾರೆ ಸೈಬರ್ ವಂಚನೆ ದೇಶದ ಡಿಜಿಟಲ್ ಭದ್ರತೆಗೆ ಸವಾಲಾಗಿದ್ದು, ಇದರ ನಿವಾರಣೆಗೆ ನಡೆಯುತ್ತಿರುವ ಪ್ರಯತ್ನ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಖಾಸಗಿ ಸಂಸ್ಥೆಗಳ ಜತೆ ಸರ್ಕಾರ ಸಹ ಈ ಕ್ಷೇತ್ರದ ಪ್ರಗತಿಗೆ ಒತ್ತು ಕೊಟ್ಟರೆ ಒಂದಿಷ್ಟು ಅಪರಾಧವನ್ನು ಮಟ್ಟಹಾಕಬಹುದು. ಶಂಕರ್ ಬಿದರಿಯವರು ಕಳೆದುಕೊಂಡ ಹಣ ವಾಪಸ್ ಪಡೆದ ರೀತಿಯಲ್ಲೇ ಇತರರೂ ಪಡೆಯಬಹುದಾಗಿದೆ.
ಇದನ್ನೂಓದಿ:ಭಾರತದ ಆರ್ಥಿಕ ಸಮೀಕ್ಷೆ ವರದಿ ಮಂಡನೆ: ಶೇ 6.5 ಜಿಡಿಪಿ ಬೆಳವಣಿಗೆ ಅಂದಾಜು