ಬೆಂಗಳೂರು: ಎಲ್ಲವೂ ಆನ್‌ಲೈನ್ ಆಗಿರುವ ಇಂದಿನ ಯುಗದಲ್ಲಿ ಪೊಲೀಸರು ಎಷ್ಟೇ ಅರಿವು ಮೂಡಿಸಿದರೂ ಸೈಬರ್ ವಂಚನೆ ಪ್ರಕರಣಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ ಕ್ಲೈಮ್ ಎಂದು ಬ್ಯಾಂಕಿನ ಹೆಸರಿನಲ್ಲಿ ಲಿಂಕ್ ಕಳಿಸಿದ್ದ ಸೈಬರ್ ಖದೀಮರು 70 ವರ್ಷದ ನಿವೃತ್ತ ಇಂಜಿನಿಯರ್ ಒಬ್ಬರ ಖಾತೆಗೆ ಕನ್ನ ಹಾಕಿರುವ ಪ್ರಕರಣ ಆಗ್ನೇಯ ವಿಭಾಗದ ಸಿಇಎನ್ ಠಾಣೆಯಲ್ಲಿ ದಾಖಲಾಗಿದೆ.
ದೂರುದಾರರು ತಮ್ಮ ಮೊಬೈಲಿಗೆ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ಸ್ ಕ್ಲೈಮ್ ಎಂದು ವಂಚಕರು ಕಳಿಸಿದ್ದ ಲಿಂಕ್ ಕ್ಲಿಕ್ ಮಾಡಿದಾಗ ಅಧಿಕೃತ ವೆಬ್‌ಸೈಟ್‌ನ್ನೇ ಹೋಲುವ ನಕಲಿ ವೆಬ್‌ಸೈಟ್ ತೆರೆದಿದೆ. ನೋಡನೋಡುತ್ತಿದ್ದಂತೆ ಖಾತೆಯಲ್ಲಿದ್ದ 1.93 ಲಕ್ಷ ಕಡಿತವಾಗಿದೆ.
ವಿಚಿತ್ರವೆಂದರೆ ನಿನ್ನೆ ಒಂದೇ ದಿನ ಆಗ್ನೇಯ ವಿಭಾಗದ ಅನೇಕ ಜನರ ನಂಬರ್ಗೆ ಇದೇ ರೀತಿ ಕೆವೈಸಿ ಅಪ್ಡೇಟ್, ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ ಕ್ಲೈಮ್ ಹೆಸರಿನಲ್ಲಿ ಇದೇ ರೀತಿಯ ಮೆಸ್ಸೇಜುಗಳು ಬಂದಿದ್ದು, ಹಲವಾರು ಖಾತೆಗಳಿಗೆ ಸೈಬರ್ ವಂಚಕರು ಕನ್ನ ಹಾಕಿದ್ದಾರೆ.
ಸಿಇಎನ್ ಠಾಣೆಗೆ ಸಾಲು ಸಾಲು ದೂರುಗಳು ಬಂದಿದ್ದು, ನೋಯ್ಡಾ ಮೂಲದ ಪೇಟಿಎಂ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂಬುದನ್ನು ಪತ್ತೆ ಹಚ್ಚಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಮಾಹಿತಿ ನೀಡಿದ್ದಾರೆ. ಅಲ್ಲದೇ ಬ್ಯಾಂಕ್ ಹೆಸರಿನಲ್ಲಿ ಅಥವಾ ಇನ್ಯಾವುದೋ ಹೆಸರಲ್ಲಿ ಅಪರಿಚಿತ ವ್ಯಕ್ತಿಗಳಿಂದ ಕರೆ ಬಂದರೆ ಅಥವಾ ನಿಮ್ಮ ಮೊಬೈಲ್ಗಳಿಗೆ ಲಿಂಕ್ಗಳು ಬಂದರೆ ಅವುಗಳನ್ನು ತಿರಸ್ಕರಿಸಿ. ಅವರೊಂದಿಗೆ ನಿಮ್ಮ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ ಎಂದು ಡಿಸಿಪಿ ತಿಳಿಸಿದರು.
ಇದನ್ನೂ ಓದಿ: ಯೋಧರ ಹೆಸರಲ್ಲಿ ಸೈಬರ್ ಕ್ರೈಂ: ನಿಮಗೂ ಬರಬಹುದು ಇಂತಹ ಕರೆ ಎಚ್ಚರ!