ಬೆಂಗಳೂರು: ಕ್ರೆಡಿಟ್ ಕಾರ್ಡ್ನಲ್ಲಿ ಗಳಿಸಿಕೊಂಡಿರುವ ಪಾಯಿಂಟ್ ಮುಕ್ತಾಯವಾಗಲಿದೆ ಎಂದು ಕರೆ ಮಾಡಿ ವಂಚಿಸಲು ಯತ್ನಿಸಿದ್ದಾರೆ ಎಂದು ಸೈಬರ್ ಖದೀಮರ ವಿರುದ್ಧ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ನಗರ ಕೇಂದ್ರ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜೂ. 14ರಂದು ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿದ ಮಹಿಳೆ, ಸಿಟಿ ಬ್ಯಾಂಕ್ ಮಾಸ್ಟರ್ ಕ್ರೆಡಿಟ್ ಕಾರ್ಡ್ನಲ್ಲಿ ಗಳಿಸಿಕೊಂಡಿರುವ ಪಾಯಿಂಟ್ ಮುಕ್ತಾಯವಾಗಲಿದೆ ಎಂದು ತಿಳಿಸಿದ್ದಾಳೆ.
ಇದರಿಂದ ಅನುಮಾನಗೊಂಡು ಸಂತೋಷ್ ಹೆಗ್ಡೆ ಕರೆ ಸ್ಥಗಿತಗೊಳಿಸಿದ್ದಾರೆ. ನಂತರ ಓಟಿಪಿ ಕಳುಹಿಸುವಂತೆ ಮೇಸೆಜ್ ಮಾಡಿದ್ದಾಳೆ. ಮೋಸ ಮಾಡುವ ದುರುದ್ದೇಶದಿಂದ ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿ ವಂಚಿಸಲು ಪ್ರಯತ್ನಿಸಿದ್ದಾಳೆ ಎಂದು ದೂರಿನಲ್ಲಿ ಸಂತೋಷ್ ಹೆಗ್ಡೆ ಉಲ್ಲೇಖಿಸಿದ್ದಾರೆ. ಸದ್ಯ ಸೆಂಟ್ರಲ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.