ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆಗೆ ಸಂಬಂಧಿಸಿದ ಪ್ರಕರಣವನ್ನು ವಕೀಲರ ಮೂಲಕ ವಾಪಸ್ ಪಡೆದುಕೊಳ್ಳಲು ಮನವಿ ಪತ್ರ ಸಲ್ಲಿಸಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿಗೆ, ಕಬ್ಬನ್ ಪಾರ್ಕ್ ಪೊಲೀಸರು ಮತ್ತೊಮ್ಮೆ ನೋಟಿಸ್ ನೀಡಲು ಚಿಂತನೆ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಚಾರಿತ್ರ್ಯವಧೆಯಾಗುತ್ತಿದೆ ಎಂದು ಮನನೊಂದು ವಕೀಲ ಕುಮಾರ್ ಪಾಟೀಲ ಮೂಲಕ ದೂರು ವಾಪಸ್ಗಾಗಿ ಐದು ಪುಟಗಳ ಮನವಿ ಪತ್ರವನ್ನು ಪೊಲೀಸರಿಗೆ ನೀಡಿದ್ದರು. ಈ ಮನವಿ ಪತ್ರವನ್ನು ಸ್ವೀಕರಿಸಿರುವ ಪೊಲೀಸರು ಕಲ್ಲಹಳ್ಳಿಗೆ ಖುದ್ದು ಹಾಜರಾಗುವಂತೆ ನೋಟಿಸ್ ಜಾರಿ ಮಾಡಲು ಮುಂದಾಗಿದ್ದಾರೆ.
ಓದಿ:ಜಾರಕಿಹೊಳಿ ಸಿಡಿ ಪ್ರಕರಣ: ದೂರು ವಾಪಸ್ ಪಡೆಯಲಿರುವ ದಿನೇಶ್ ಕಲ್ಲಹಳ್ಳಿ
ವಕೀಲರ ಮೂಲಕ ಕಲ್ಲಹಳ್ಳಿ ನೀಡಿರುವ ಮನವಿ ಪತ್ರದ ಬಗ್ಗೆ ದೂರು ವಾಪಸ್ ಪಡೆಯಬೇಕೇ ಅಥವಾ ತನಿಖೆ ನಡೆಸಬೇಕೆ ಎಂಬುದು ತನಿಖಾಧಿಕಾರಿಗಳ ವಿವೇಚನೆಗೆ ಬಿಟ್ಟ ವಿಚಾರ. ಕಲ್ಲಹಳ್ಳಿ ಪರ ಮನವಿ ಪತ್ರವನ್ನು ವಕೀಲರು ನೀಡಿದ್ದಾರೆ. ಇದನ್ನು ತಿರಸ್ಕೃತಗೊಳಿಸಿ ನೇರವಾಗಿ ಕಲ್ಲಹಳ್ಳಿಗೆ ನೋಟಿಸ್ ನೀಡಲು ಚಿಂತನೆ ನಡೆಸಿದ್ದೇವೆ. ನೇರವಾಗಿ ಠಾಣೆಗೆ ಬಂದು ದೂರು ವಾಪಸ್ ಬಗ್ಗೆ ದೂರು ಕೊಟ್ಟರೆ ಅವರನ್ನು ವಿಚಾರಣೆ ಒಳಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಚಾರಣೆ ವೇಳೆ ದೂರು ವಾಪಸ್ ಪಡೆದುಕೊಳ್ಳುವುದಕ್ಕೆ ಕಾರಣವೇನು? ಬೆದರಿಕೆ ಕರೆಗಳಿಂದ ದೂರು ವಾಪಸ್ ಪಡೆದುಕೊಳ್ಳಲಾಗುತ್ತಿದೆಯಾ? ಯಾವುದೇ ದುರುದ್ದೇಶದಿಂದ ದೂರು ನೀಡಿದ್ರಾ ? ಎಂಬುದರ ವಿಚಾರಣೆ ನಡೆಯಲಿದೆ. ಕಲ್ಲಹಳ್ಳಿ ದೂರು ವಾಪಸ್ ಪಡೆದೆ ಎಂದು ಹೇಳಿಕೊಂಡರೆ ಪ್ರಕರಣ ಮುಕ್ತಾಯವಾಗಲ್ಲ ಎಂಬುವುದು ಪೊಲೀಸರ ವಾದವಾಗಿದೆ. ದಿನೇಶ್ ಕಲ್ಲಹಳ್ಳಿ ಪರ ವಕೀಲರ ಕೊಟ್ಟಿರುವುದು ಅರ್ಜಿ ಅಷ್ಟೇ. ಸಂತ್ರಸ್ತೆ ಪತ್ತೆ ಹಚ್ಚಿ ಆಕೆಯ ಹೇಳಿಕೆ ಮೇಲೆ ಪ್ರಕರಣ ಮುಂದುವರೆಯಲಿದೆ ಎನ್ನಲಾಗಿದೆ.