ಬೆಂಗಳೂರು: ಸರ್ಕಾರಿ ನೌಕರರ ಒಂದು ತಿಂಗಳ ವೇತನ ಕಡಿತ ಮಾಡುವ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು, ಸಾಮಾಜಿಕ ಜಾಲತಾಣದಲ್ಲಿ ರಾಜ್ಯದ ಸರ್ಕಾರಿ ನೌಕರರ ಒಂದು ತಿಂಗಳ ವೇತವನ್ನು ಹಿಡಿಯುವ ತೀರ್ಮಾನವನ್ನು ಇಂದಿನ ಸಚಿವ ಸಂಪುಟದ ಸಭೆಯಲ್ಲಿ ತೆಗೆದುಕೊಂಡಿದೆ ಎಂಬ ವಿಷಯ ಹರಿದಾಡುತ್ತಿದೆ. ಇದು ರಾಜ್ಯದ ಸರ್ಕಾರಿ ನೌಕರರನ್ನು ಗೊಂದಲಕ್ಕಿಡುಮಾಡಿರುವುದನ್ನು ಗಮನಿಸಲಾಗಿದೆ ಎಂದಿದ್ದಾರೆ.
ರಾಜ್ಯ ಸರ್ಕಾರಗಳು ಈ ರೀತಿಯಾಗಿ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ಸಂಪ್ರದಾಯದಂತೆ ರಾಜ್ಯದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಕರೆದು ಚರ್ಚಿಸಿ ತೀರ್ಮಾನಗಳನ್ನು ಈ ಹಿಂದೆ ತೆಗೆದುಕೊಂಡಿರುತ್ತದೆ. ಆದರೆ, ಈ ಕ್ಷಣದವರೆಗೂ ಆ ರೀತಿಯ ಯಾವುದೇ ಚರ್ಚೆಗಳನ್ನು ಸರ್ಕಾರವು ಸಂಘದ ಜೊತೆ ಮಾಡಿರುವುದಿಲ್ಲ ಎಂದು ತಿಳಿಸಿದ್ದಾರೆ. ಹಾಗಾಗಿ ಇಂದು ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಸರ್ಕಾರಿ ನೌಕರರ ಒಂದು ತಿಂಗಳ ವೇತನವನ್ನು ಕಟಾವು ಮಾಡುತ್ತೇವೆ ಎಂಬ ಅಂಶ ಸತ್ಯಕ್ಕೆ ದೂರವಾದದ್ದು ಹಾಗೂ ಗಾಳಿ ಸುದ್ದಿ ಎಂಬ ವಿಚಾರವನ್ನು ಸಮಸ್ತ ರಾಜ್ಯದ ಸರ್ಕಾರಿ ನೌಕರರಿಗೆ ಕರ್ನಾಟಕ ರಾಜ್ಯ ಸರ್ಕಾರಿ ಸಂಘವು ತಿಳಿಸುತ್ತದೆ ಹಾಗೂ ಗೊಂದಲಕ್ಕಿಡಾಗಬಾರದೆಂದು ವಿನಂತಿಸಿಕೊಂಡಿದ್ದಾರೆ.