ಬೆಂಗಳೂರು : ಜಗಳದ ವೇಳೆ ಗಂಡ ತನ್ನ ಎಡಗೈ ಬೆರಳನ್ನು ಕಚ್ಚಿ ತಿಂದಿದ್ದಾನೆ ಎಂದು ಆರೋಪಿಸಿ ಪತ್ನಿ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ವಿಚಿತ್ರ ಪ್ರಕರಣ ನಗರದಲ್ಲಿ ನಡೆದಿದೆ. ಪುಷ್ಪಾ ಎಂಬ 40 ವರ್ಷದ ಮಹಿಳೆ ನೀಡಿರುವ ದೂರಿನನ್ವಯ ಆಕೆಯ ಪತಿ ವಿಜಯಕುಮಾರ್ ವಿರುದ್ಧ ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ 23 ವರ್ಷಗಳ ಹಿಂದೆ ಪುಷ್ಪಾ ಹಾಗೂ ವಿಜಯ್ ಕುಮಾರ್ಗೆ ಮದುವೆಯಾಗಿತ್ತು. ಕೆಲ ವರ್ಷಗಳಿಂದ ವಿಜಯ್ ಕುಮಾರ್ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದ ಪುಷ್ಪಾ ಕೊತ್ತನೂರಿನ ಸಾರಥಿ ನಗರದಲ್ಲಿ ತನ್ನ ಮಗನೊಂದಿಗೆ ಪ್ರತ್ಯೇಕವಾಗಿ ವಾಸವಿರಲಾರಂಭಿಸಿದ್ದರು.
ಕಳೆದ ಜುಲೈ 28ರಂದು ಮನೆಗೆ ಬಂದು ಜಗಳ ತೆಗೆದಿದ್ದ ಪತಿ ವಿಜಯಕುಮಾರ್, ತನ್ನ ಎಡಗೈ ಬೆರಳನ್ನು ಕಚ್ಚಿ ತಿಂದಿದ್ದಾನೆ ಎಂದು ಪುಷ್ಪಾ ಆರೋಪಿಸಿದ್ದಾರೆ. ಅಲ್ಲದೇ ಇದೇ ರೀತಿ ನಿನ್ನನ್ನೂ ಕತ್ತರಿಸಿ ತಿನ್ನುತ್ತೇನೆ ಎಂದು ಹೇಳಿರುವುದಾಗಿ ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಮಗನ ಮೇಲೂ ಹಲ್ಲೆ ನಡೆಸಿದ ವಿಜಯ್ ಕುಮಾರ್, ರೌಡಿಶೀಟರ್ ಗಳನ್ನ ಬಿಟ್ಟು ಕೊಲೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಪುಷ್ಪಾ ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನನ್ವಯ ಆರೋಪಿಯ ವಿರುದ್ಧ ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರಳ ವೈದ್ಯಕೀಯ ವರದಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಪಿ. ಕೃಷ್ಣಕಾಂತ್ ತಿಳಿಸಿದ್ದಾರೆ.
ಎಫ್ಐಆರ್ ವಿವರ : ಎಫ್ಐಆರ್ ಪ್ರಕಾರ, ಪುಷ್ಪಾ ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಪತಿ ವಿಜಯ್ ಕುಮಾರ್ ವಿರುದ್ಧ ದೂರು ದಾಖಲಿಸಿರುವ ಪುಷ್ಪಾ, ಕಳೆದ 23 ವರ್ಷಗಳ ಹಿಂದೆ ನಾವು ಮದುವೆಯಾಗಿದ್ದೆವು. ಮದುವೆಯಾದಂದಿನಿಂದ ಪತಿ ವಿಜಯ್ಕುಮಾರ್ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದರಿಂದ ನಾನು ಮತ್ತು ಮಗ ಪತ್ಯೇಕವಾಗಿ ಮನೆಮಾಡಿಕೊಂಡು ವಾಸ ಮಾಡುತ್ತಿದ್ದೆವು.
ಕಳೆದ ಜುಲೈ 28ರಂದು ಸಂಜೆ 4 ಗಂಟೆಗೆ ಇಲ್ಲಿನ ಮನೆಗೆ ಆಗಮಿಸಿದ ಆರೋಪಿ ವಿಜಯ್ ಕುಮಾರ್, ನನ್ನ ಜೊತೆ ಜಗಳ ಮಾಡಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ಎಡಗೈ ಬೆರಳನ್ನು ಕಚ್ಚಿ ತಿಂದು ಹಾಕಿ, ಇದೇ ರೀತಿ ನಿನ್ನನ್ನು ಕತ್ತರಿಸಿ ತಿಂದು ಬಿಡುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿದ್ದಾನೆ. ಈ ವೇಳೆ ಅಡ್ಡಬಂದ ಮಗನ ಮೇಲೂ ಹಲ್ಲೆ ಮಾಡಿ, ನಿನ್ನನ್ನು ಮಾತ್ರ ಜೀವಂತ ಬದುಕಲು ಬಿಡುವುದಿಲ್ಲ. ರೌಡಿಗಳಿಗೆ ದುಡ್ಡು ಕೊಟ್ಟಿದ್ದೇನೆ. ಸ್ವಲ್ಪ ದಿನದಲ್ಲೇ ಬಂದು ಕೊಲೆ ಮಾಡುತ್ತಾರೆ ಎಂದು ಬೆದರಿಕೆ ಹಾಕಿರುತ್ತಾನೆ. ಆದ್ದರಿಂದ ಆರೋಪಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಕೋರಿದ್ದಾರೆ.
ಇದನ್ನೂ ಓದಿ : ಬೆಂಗಳೂರು: ಹೆಂಡತಿ ಮಕ್ಕಳನ್ನ ಕೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ..