ಬೆಂಗಳೂರು : ವಿದ್ಯುತ್ ಬಿಲ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಎರಡು ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಠಲ್ ಮಲ್ಯ ರಸ್ತೆಯ ನಿವಾಸಿಯೊಬ್ಬರಿಗೆ ಬೆಸ್ಕಾಂ ಸಿಬ್ಬಂದಿ ಹೆಸರಿನಲ್ಲಿ ಕರೆ ಮಾಡಿದ್ದ ಅನಾಮಧೇಯ ವ್ಯಕ್ತಿಯೊಬ್ಬ ವಂಚನೆ ಮಾಡಿದ್ದಾನೆ.
ಜುಲೈ 13 ರಂದು ಕರೆ ಮಾಡಿದ ಅನಾಮಧೇಯ ವ್ಯಕ್ತಿ, ವಿದ್ಯುತ್ ಬಿಲ್ ಪಾವತಿಸಿ, ಇಲ್ಲವಾದಲ್ಲಿ ಸಂಪರ್ಕ ಸ್ಥಗಿತಗೊಳಿಸುತ್ತೇವೆ' ಎಂದಿದ್ದ. ಅದರಂತೆ ದೂರುದಾರ ಬಿಲ್ ಪಾವತಿಸಲು ಮುಂದಾಗಿದ್ದಾರೆ. ಈ ವೇಳೆ ಆರೋಪಿ ಲಿಂಕ್ವೊಂದನ್ನು ಕಳಿಸಿದ್ದ. ಆ ಲಿಂಕ್ ನಿಂದ ಆನ್‌ಲೈನ್ ಪಾವತಿ ವಿಫಲವಾದಾಗ ಮತ್ತೊಂದು ಲಿಂಕ್ ಕಳಿಸಿ 10 ರೂಪಾಯಿ ಪಾವತಿಸಲು ಹೇಳಿದ್ದ.
ಅದರಂತೆ ದೂರುದಾರರು 10 ರೂಪಾಯಿ ಪಾವತಿಸಿದ್ದರು. ತಕ್ಷಣ ಖಾತೆಯಲ್ಲಿದ್ದ ಎರಡು ಲಕ್ಷ ರೂ. ಕೆಲವೇ ಸೆಕೆಂಡುಗಳಲ್ಲಿ ಮಂಗಮಾಯವಾಗಿತ್ತು. ಬಳಿಕ ಹಣ ಕಳೆದುಕೊಂಡ ವ್ಯಕ್ತಿ ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.
25 ಲಕ್ಷ ರೂ. ವಂಚನೆ : ಐದನೂರು ರೂಪಾಯಿಯ ನೋಟುಗಳನ್ನು ನೀಡಿದರೆ ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಹೆಚ್ಚುವರಿ ನೀಡುವುದಾಗಿ 25 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ಇತ್ತೀಚೆಗೆ ನಡೆದಿತ್ತು. ಬೆಂಗಳೂರು ನಿವಾಸಿ ಸಿವಿಲ್ ಕಂಟ್ರ್ಯಾಕ್ಟರ್ ಆಗಿರುವ ಸುರೇಶ್ ಎಂಬುವರು ಹಣ ಕಳೆದುಕೊಂಡವರು. ಇವರು ನೀಡಿರುವ ದೂರಿನ ಮೇರೆಗೆ ಶಿವು, ಶಿವಕುಮಾರ ಸ್ವಾಮಿ, ಶ್ರೀನಿವಾಸ್ ಎಂಬಾತ ಸೇರಿದಂತೆ ನಾಲ್ವರ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮಂಡ್ಯ: ನೋಟಿನ ಕಂತೆ ನಡುವೆ ಬಿಳಿ ಹಾಳೆ ಇಟ್ಟು ವಂಚಿಸಲು ಯತ್ನಿಸಿದವನಿಗೆ ಬಿತ್ತು ಗೂಸಾ
ನಟ ಆನಂದ್ ಪುತ್ರಿ ಹೆಸರಿನಲ್ಲಿ ವಂಚನೆ : ನಟ ಹಾಗೂ ನಿರೂಪಕ ಮಾಸ್ಟರ್ ಆನಂದ್ ಪುತ್ರಿ ಹೆಸರು ಬಳಸಿ ಹಣ ವಂಚನೆ ಎಸಗಿದ ಆರೋಪದಡಿ ನಿಶಾ ನರಸಿಂಹಪ್ಪ ಎಂಬುವರನ್ನು ಜುಲೈ 14ರಂದು ಸದಾಶಿವನಗರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈವೆಂಟ್ ಮ್ಯಾನೇಜ್ಮೆಂಟ್ ಕೆಲಸ ಮಾಡುತ್ತಿದ್ದ ನಿಶಾ, ಎನ್ಎನ್ ಪ್ರೊಡಕ್ಷನ್ ಕಂಪನಿ ಸಂಸ್ಥಾಪಕಿಯಾಗಿದ್ದರು. ರಿಯಾಲಿಟಿ ಶೋ ವಿಜೇತೆಯಾಗಿದ್ದ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಿನಲ್ಲಿ ಆ್ಯಕ್ಟಿಂಗ್ ಕ್ಲಾಸ್, ಟ್ಯಾಲೆಂಟ್ ಶೋ ಹಾಗೂ ಖಾಸಗಿ ಚಾನಲ್ನಲ್ಲಿ ರಿಯಾಲಿಟಿ ಶೋಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಆನೇಕ ಪೋಷಕರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ್ದಾರೆ ಎಂದು ನಟ ಆನಂದ್ ಪತ್ನಿ ಯಶಸ್ವಿನಿ ದೂರು ನೀಡಿದ ಮೇರೆಗೆ ಆರೋಪಿ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಇದನ್ನೂ ಓದಿ : Honeytrap: ಟೆಲಿಗ್ರಾಮ್ ಮೂಲಕ ಪರಿಚಯ..ಬಲೆಗೆ ಬಿದ್ದ ಯುವಕರಿಗೆ ಪಂಗನಾಮ ಹಾಕುತ್ತಿದ್ದ ಗ್ಯಾಂಗ್ ಬಂಧನ