ಬೆಂಗಳೂರು : ಪತ್ನಿಯನ್ನು ಕೊಲ್ಲಲು ಅಪಘಾತವೆಸಗಿದ್ದ ಪಾಪಿ ಪತಿ ಹಾಗೂ ಮತ್ತೋರ್ವ ಆರೋಪಿಯನ್ನು 6 ತಿಂಗಳ ಬಳಿಕ ಬಂಧಿಸುವಲ್ಲಿ ಬಾಗಲೂರು ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಅರವಿಂದ ಹಾಗೂ ಉದಯ್ ಕುಮಾರ್ ಬಂಧಿತರು. ಹೊಸ ವರ್ಷದ ದಿನದಂದೇ ಬಾಗಲೂರಿನ ಕೆಐಡಿಬಿ ಲೇಔಟ್ನಲ್ಲಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಚೈತನ್ಯ ಎಂಬಾಕೆಗೆ ಅಪಘಾತವೆಸಗಿದ್ದ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆಕೆಯ ಪತಿ ಅರವಿಂದ್ ಹಾಗೂ ಆತನ ಸಹಚರ ಉದಯ್ ಕುಮಾರ್ ಎಂಬಿಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಘಟನೆಯ ವಿವರ : ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದ ಅರವಿಂದ ಮತ್ತು ಚೈತನ್ಯ ದಂಪತಿ ಮಧ್ಯೆ ಕೌಟುಂಬಿಕ ಕಲಹ ಆರಂಭವಾಗಿತ್ತು. ತನ್ನ ತಂದೆ ತಾಯಿಯನ್ನು ಪತ್ನಿ ಚೈತನ್ಯ ಅವರೇ ತನ್ನಿಂದ ದೂರ ಮಾಡಿದರು ಎಂದು ಅರವಿಂದ್ ಕೋಪಗೊಂಡಿದ್ದ. ಇದೇ ಕೋಪದಿಂದ ಒಂದೂವರೆ ವರ್ಷಕ್ಕೆ ವಿಚ್ಛೇದನ ಕೊಡುವಂತೆ ಪತ್ನಿಯನ್ನು ಪೀಡಿಸಲಾರಂಭಿಸಿದ್ದ. ಆದರೆ ವಿಚ್ಛೇದನ ನೀಡಲು ಚೈತನ್ಯ ಒಪ್ಪಿರಲಿಲ್ಲ. ಹಾಗಾಗಿ ಆಕೆಯನ್ನು ಕೊಲೆ ಮಾಡಲು ಅರವಿಂದ್ ನಿರ್ಧರಿಸಿದ್ದ. ಅಪಘಾತವಾದಂತೆ ಕೊಲೆ ಮಾಡಲು ಪ್ಲಾನ್ ರೂಪಿಸಿಕೊಂಡು ಅದಕ್ಕಾಗಿ ಹಳೆಯದೊಂದು ಟಾಟಾ ಸುಮೋ ಕಾರು ಖರೀದಿಸಿದ್ದ. ಅದಕ್ಕೆಂದೇ ಉದಯ್ ಕುಮಾರ್ ಎಂಬ ಚಾಲಕನನ್ನು ನೇಮಿಸಿಕೊಂಡಿದ್ದ.
ಆರೋಪಿಗಳ ನಡುವೆ ಸ್ನೇಹ : ತನ್ನ ಪತ್ನಿಗೆ ಅಪಘಾತ ಮಾಡಬೇಕು ಎಂದು ಅರವಿಂದ್ ಹೇಳಿದಾಗ ಮರುಮಾತನಾಡದೇ ಉದಯ್ ಕುಮಾರ್ ಒಪ್ಪಿಕೊಂಡಿದ್ದ. ಕಾರಣವೇನೆಂದರೆ ಉದಯ್ ದಾಂಪತ್ಯದಲ್ಲಿಯೂ ಕೌಟುಂಬಿಕ ಕಲಹದಿಂದ ವಿಚ್ಛೇದನದ ಮಾತುಕತೆ ನಡೀತಿತ್ತು. 'ಎಲ್ಲರ ಪತ್ನಿಯರೂ ಒಂದೇ, ಕೊಂದೇ ಬಿಡೋಣ' ಎಂಬ ತೀರ್ಮಾನಕ್ಕೆ ಉದಯ್ ಬಂದುಬಿಟ್ಟಿದ್ದ. ಬಳಿಕ ಚೈತನ್ಯ ಒಂಟಿಯಾಗಿ ಎಲ್ಲೆಲ್ಲಿ ಸಿಗಬಹುದು? ಸಿಸಿಟಿವಿ ಇರದ ಸ್ಥಳಗಳು ಯಾವುವು? ಎಂದು ಇಬ್ಬರೂ ಸಹ ವಾಚ್ ಮಾಡಿದ್ದರು.
ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಚೈತನ್ಯರನ್ನು ಕೊಲ್ಲಲು ಆರೋಪಿಗಳು ಸಿದ್ಧತೆ ಮಾಡಿಕೊಂಡಿದ್ದರು. ಇದೇ ವರ್ಷ ಜನವರಿ 1ರಂದು ಭರತನಾಟ್ಯ ತರಗತಿ ಮುಗಿಸಿ ದ್ವಿಚಕ್ರ ವಾಹನದಲ್ಲಿ ವಾಪಸಾಗುತ್ತಿದ್ದ ಚೈತನ್ಯಳಿಗೆ ಬಾಗಲೂರಿನ ಕೆಐಡಿಬಿ ಲೇಔಟ್ ಬಳಿ ಆರೋಪಿಗಳು ಅಪಘಾತವೆಸಗಿ ಪರಾರಿಯಾಗಿದ್ದರು. ತಲೆ, ಕೈ ಕಾಲಿಗೆ ಗಂಭೀರವಾದ ಗಾಯಗಳೊಂದಿಗೆ ಸಾವಿನಿಂದ ಪಾರಾದ ಚೈತನ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದ ದೇವನಹಳ್ಳಿ ಸಂಚಾರಿ ಪೊಲೀಸರು ಅನುಮಾನ ಇದ್ದುದ್ದರಿಂದ ಪ್ರಕರಣವನ್ನು ಬಾಗಲೂರು ಠಾಣೆಗೆ ವರ್ಗಾವಣೆ ಮಾಡಿದ್ದರು.
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಬಾಗಲೂರು ಠಾಣಾ ಪೊಲೀಸರು ಅಪಘಾತವೆಸಗಿದ್ದ ಕಾರನ್ನು ಮೊದಲು ಪತ್ತೆ ಹಚ್ಚಿದ್ದರು. ಡ್ಯಾಮೇಜ್ ಆದ ಕಾರಣ ಆರೋಪಿಗಳು ಕಾರನ್ನು ಗ್ಯಾರೇಜಿನಲ್ಲಿ ರಿಪೇರಿಗೆ ಬಿಟ್ಟಿದ್ದರು. ಕಾರಿನ ಮಾಲೀಕರನ್ನು ಪತ್ತೆ ಹಚ್ಚಿದಾಗ ಅದು ಮಾರಾಟವಾಗಿರುವುದು ಮತ್ತು ದಾಖಲೆಗಳ ವರ್ಗಾವಣೆಯಾಗದಿರುವುದು ತಿಳಿದು ಬಂದಿತ್ತು. ಬಳಿಕ ಕಾರು ಖರೀದಿಸಿದವನನ್ನು ಪತ್ತೆ ಹಚ್ಚಿದಾಗ ಆತ ಚೈತನ್ಯರ ಪತಿ ಅರವಿಂದ್ ಎಂಬುದು ಬಯಲಾಗಿತ್ತು. ಬಳಿಕ ಅರವಿಂದ್ ಹಾಗೂ ಕಾರು ಚಾಲಕ ಉದಯ್ ಕುಮಾರ್ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಅಸಲಿ ಸತ್ಯಾಂಶ ಹೊರಬಂದಿದೆ.
ಅರವಿಂದ್ ಮತ್ತು ಉದಯ್ ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಗಾಯಾಳು ಚೈತನ್ಯ ಅವರ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಮೈಸೂರಲ್ಲಿ ಪ್ರತ್ಯೇಕ ಘಟನೆ: ಮನೆಗೆ ಬಾರದ ಪತ್ನಿಯನ್ನೇ ಕೊಂದ ಪತಿ, ಕಾವೇರಿ ಹಿನ್ನೀರಲ್ಲಿ ಮುಳುಗಿ 3 ವಿದ್ಯಾರ್ಥಿಗಳ ಸಾವು