ಬೆಂಗಳೂರು: ಕ್ರಿಕೆಟ್ ಆಟದ ಸೋಲು - ಗೆಲುವಿನ ವಿಚಾರವಾಗಿ ಆರಂಭವಾದ ಜಗಳದಲ್ಲಿ ಸ್ನೇಹಿತರೇ ಸಹೋದರರಿಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಳ್ಳಂದೂರು ಸಮೀಪದ ಹರಳೂರು ರಸ್ತೆಯಲ್ಲಿ ನಡೆದಿದೆ. ಆಗಸ್ಟ್ 9ರ ರಾತ್ರಿ 9 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಜೀವನ್ ಜೋಯೆಲ್ ಮತ್ತು ಜೋಸೆಫ್ ಎಂಬ ಸಹೋದರರ ಮೇಲೆ ಹಲ್ಲೆ ಮಾಡಿದ ಆರೋಪದಡಿ ರಮೇಶ್, ಯಶ್ವಂತ್, ಪವನ್ ಎಂಬಾತನನ್ನು ಬಂಧಿಸಲಾಗಿದೆ.
ಕ್ರಿಕೆಟ್ ಆಡುವಾಗ ಸೋಲು ಗೆಲುವಿನ ವಿಚಾರದಲ್ಲಿ ಸ್ನೇಹಿತರ ನಡುವೆ ಕಿರಿಕ್ ನಡೆದಿತ್ತು. ಪರಸ್ಪರ ಒಬ್ಬರ ಬಗ್ಗೆ ಮತ್ತೊಬ್ಬರು ಕೆಟ್ಟದಾಗಿ ಮಾತನಾಡಿಕೊಳ್ಳುತ್ತಿದ್ದರು ಎಂಬ ಸಿಟ್ಟಿಗೆ ಆರೋಪಿಗಳು ಆಗಸ್ಟ್ 9ರಂದು ಮಾತನಾಡಬೇಕು ಎಂದು ಕರೆಸಿಕೊಂಡಿದ್ದರು. ಅದರಂತೆ ಜೀವನ್ ಜೋಯೆಲ್ ಹಾಗೂ ಜೋಸೆಫ್ ಸಹೋದರರು ಹರಳೂರು ರಸ್ತೆಯಲ್ಲಿರುವ ಆಂಬೂರ್ ಧಮ್ ಬಿರಿಯಾನಿ ಅಂಗಡಿ ಸಮೀಪ ಬಂದಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಆರೋಪಿಗಳು ಜೀವನ್ ಮತ್ತು ಜೋಸೆಫ್ ಮೇಲೆ ಆರೋಪಿಗಳು ಬಾಂಡಲಿ, ಸೌಟ್, ನೀರಿನ ಕ್ಯಾನ್ ಸೇರಿ ಅಡುಗೆ ಸಾಮಗ್ರಿಗಳಿಂದ ಮನ ಬಂದಂತೆ ಹಲ್ಲೆ ಮಾಡಿದ್ದಾರೆ. ನಡು ರಸ್ತೆಯಲ್ಲಿ ಸಹೋದರರ ಮೇಲೆ ಹಲ್ಲೆ ಮಾಡುವ ದೃಶ್ಯಗಳು ಸಾರ್ವಜನಿಕರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದವು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬೆಳ್ಳಂದೂರು ಠಾಣಾ ಪೊಲೀಸರು ಆರೋಪಿಗಳಾದ ರಮೇಶ್, ಯಶ್ವಂತ್, ಪವನ್ಅನ್ನು ಬಂಧಿಸಿದ್ದಾರೆ.
ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಎಸ್. ಗಿರೀಶ್ ಮಾತನಾಡಿ, ಸುಮಾರು 9 ಗಂಟೆಗೆ ಹರಳೂರು ರಸ್ತೆಯ ಹೋಟೆಲ್ ಬಳಿ ಗೆಳಯರೇ ಹೊಡೆದಾಟ ನಡೆಸಿಕೊಂಡಿರುತ್ತಾರೆ. ಕ್ರಿಕೆಟ್ ಅಲ್ಲಿ ಗೆದ್ದಿರೋದು ಸೋತಿರೋವುದು, ಒಬ್ಬರ ಬಗ್ಗೆ ಇನ್ನೊಬ್ಬರು ಕೆಟ್ಟ ಕೆಟ್ಟದಾಗಿ ಮಾತನಾಡಿರುವುದರ ಬಗ್ಗೆ ಜಗಳ ಮಾಡಿಕೊಳ್ಳುತ್ತಾರೆ. ಗಲಾಟೆಯಾಗಿ ಸ್ನೇಹಿತರಲ್ಲೇ 1 ಗುಂಪಿನ ರಮೇಶ್, ಪವನ್, ಇನ್ನು ಇಬ್ಬರು ಸೇರಿಕೊಂಡು ಜೀವನ್ ಹಾಗು ಜೋಸೆಫ್ ಮೇಲೆ ಹೊಡೆಯುತ್ತಾರೆ.
ಜತೆಗೆ ಹೋಟೆಲ್ ಬಳಿ ಇದ್ದ ಅಡುಗೆ ಪಾತ್ರಗಳನ್ನು ತೆಗದುಕೊಂಡು ರಮೇಶ್ ಮತ್ತು ಪವನ್ ಹೊಡೆಯಲು ಬಂದಾಗ ತಡೆಯಲು ಕೈ ಹಿಡಿದ ಜೀವನ್ ಕೈಗೆ ಗಾಯಗಳಾಗಿವೆ. ಈ ವಿಚಾರದಲ್ಲಿ ನಾವು ಪ್ರಕರಣ ದಾಖಲಿಸಿದ್ದೇವೆ. ಸದ್ಯ ರಮೇಶ್ ಮತ್ತು ಪವನ್ನನ್ನು ಬಂಧಿಸಿದ್ದೇವೆ. ಇನ್ನು ಇಬ್ಬರು ಸಿಗಲು ಬಾಕಿ ಇದೆ. ಕೇವಲ ಕ್ಷುಲ್ಲಕ ಕಾರಣಕ್ಕೆ ನಡೆದ ಘಟನೆಯಾಗಿದೆ. ಆರೋಪಿಗಳಲ್ಲಿ ಯಾರೂ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ. ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Hassan murder case : ಜೆಡಿಎಸ್ ಮುಖಂಡ ಕೃಷ್ಣೇಗೌಡ್ರ ಹತ್ಯೆ ಪ್ರಕರಣ.. 6 ಆರೋಪಿಗಳ ಬಂಧನ, ಉಳಿದವರಿಗಾಗಿ ತೀವ್ರ ಶೋಧಕಾರ್ಯ