ಬೆಂಗಳೂರು: ಚಿತ್ರೀಕರಣವಾದ ಸಿನಿಮಾ ದೃಶ್ಯಗಳ ಹಾರ್ಡ್ ಡಿಸ್ಕ್ ಕೊಡದೇ, ನಿರ್ಮಾಪಕರಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಛಾಯಾಗ್ರಾಹಕನ ವಿರುದ್ಧ ಪ್ರಕರಣ ದಾಖಲಾಗಿದೆ. 'ಸಮುದ್ರಂ' ಸಿನಿಮಾದ ನಿರ್ಮಾಪಕಿ ರಾಜಲಕ್ಷ್ಮಿ ನೀಡಿರುವ ದೂರಿನನ್ವಯ ಛಾಯಾಗ್ರಾಹಕ ರಿಷಿಕೇಷ್ ವಿರುದ್ಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಅನಿತಾ ಭಟ್ ಮುಖ್ಯ ಭೂಮಿಕೆಯಲ್ಲಿರುವ 'ಸಮುದ್ರಂ' ಸಿನಿಮಾವನ್ನು ರಾಜಲಕ್ಷ್ಮಿ ಸಿನಿ ಕ್ರಿಯೇಷನ್ಸ್ ಹೆಸರಿನಲ್ಲಿ ನಿರ್ಮಾಣ ಮಾಡಲಾಗುತ್ತಿತ್ತು. ಈ ಚಿತ್ರಕ್ಕೆ ರಿಷಿಕೇಷ್ ಛಾಯಾಗ್ರಾಹಕನಾಗಿದ್ದು, ರಾಜಲಕ್ಷ್ಮಿ ಎಂಬುವವರು ಬಂಡವಾಳ ಹೂಡಿದ್ದರು. ಚಿತ್ರದ ಸಂಗೀತ, ಡಬ್ಬಿಂಗ್, ರೀ - ರೆಕಾರ್ಡಿಂಗ್, ಎಡಿಟಿಂಗ್ ಸೇರಿದಂತೆ ಪ್ರಮುಖ ಜವಬ್ದಾರಿಯನ್ನು ರಿಷಿಕೇಷ್ ವಹಿಸಿಕೊಂಡಿದ್ದ. ಪ್ರತಿಯಾಗಿ ಹಂತ ಹಂತವಾಗಿ 19 ಲಕ್ಷ ರೂಪಾಯಿ ಆನ್‌ಲೈನ್ ಮೂಲಕ ಮತ್ತಷ್ಟು ನಗದು ರೂಪದಲ್ಲಿ ಹಣವನ್ನು ನಿರ್ಮಾಪಕರಿಂದ ಪಡೆದುಕೊಂಡಿದ್ದ.
ಆದರೆ, ಅರ್ಧ ಶೂಟಿಂಗ್ ಮುಗಿಯುವಷ್ಟರಲ್ಲೇ ಚಿತ್ರ ತಂಡದಿಂದ ದೂರ ಸರಿದಿದ್ದ ರಿಷಿಕೇಷ್, ತಾನು ಹೇಳಿದವರನ್ನು ಸಹ ನಿರ್ಮಾಪಕರನ್ನಾಗಿ ಸೇರಿಸಿಕೊಳ್ಳಬೇಕು. ಇಲ್ಲವಾದಲ್ಲಿ ಶೂಟ್ ಮಾಡಿರುವ ಹಾರ್ಡ್ ಡಿಸ್ಕ್ ಕೂಡ ಕೊಡುವುದಿಲ್ಲ ಎಂದಿದ್ದ. ಸುಮಾರು ಹತ್ತು ತಿಂಗಳಿನಿಂದ ಹಾರ್ಡ್ ಡಿಸ್ಕ್ ಕೊಡದೇ, ಕರೆ ಮಾಡಿ ವಿಚಾರಿಸಿದರೆ ನಿರ್ಮಾಪಕರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ಛಾಯಗ್ರಾಹಕ ರಿಶಿಕೇಷ್ ವಿರುದ್ಧ ಆರೋಪ ಮಾಡಲಾಗಿದೆ. ಈ ಬಗ್ಗೆ ನಿರ್ಮಾಪಕಿ ರಾಜಲಕ್ಷ್ಮಿ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹಣಕ್ಕೆ ಬೇಡಿಕೆ ಆರೋಪ: ಮಹಿಳಾ ಹೆಚ್ಚುವರಿ ಎಸ್ಪಿ, ಅವರ ಪತಿ, ಎಸ್ಐಗಳು, ಚಾಲಕರು ಸೇರಿ 7 ಜನ ಅರೆಸ್ಟ್
ಸಹ ನಿರ್ಮಾಪಕಿ ಅನಿತಾ ಭಟ್ ಪ್ರತಿಕ್ರಿಯೆ: ಛಾಯಾಗ್ರಾಹಕ ರಿಷಿಕೇಷ್ ವಿರುದ್ಧ ದಾಖಲಾದ ದೂರಿನ ಕುರಿತು ಪ್ರತಿಕ್ರಿಯಿಸಿದ ನಟಿ ಹಾಗೂ ಸಹ ನಿರ್ಮಾಪಕಿ ಅನಿತಾ ಭಟ್, ಹಾರ್ಡ್ ಡಿಸ್ಕ್ ರಿಷಿಕೇಶ್ ಬಳಿಯಿದೆ ಎಂಬ ಆರೋಪವನ್ನು ತಳ್ಳಿ ಹಾಕಿದರು. "ಸಿನಿಮಾ ಚಿತ್ರೀಕರಣದ ಹಂತದಲ್ಲಿರುವಾಗಲೇ ರಾಜಲಕ್ಷ್ಮಿಯವರು ತಾವೊಬ್ಬರೇ ನಿರ್ಮಾಪಕಿಯಾಗಿ ಮುಂದುವರೆಯಬೇಕು ಎಂದಿದ್ದರಿಂದ ನಾನು ಅವರಿಗೆ ಬಿಟ್ಟುಕೊಟ್ಟಿದ್ದೆ. ನನಗಾಗಲಿ, ರಿಷಿಕೇಶ್ ಅವರಿಗಾಗಲಿ ಇದುವರೆಗೂ ಸಂಭಾವನೆ ಕೊಟ್ಟಿಲ್ಲ" ಎಂದು ಹೇಳಿದರು.
"ಸಿನಿಮಾ ಎಡಿಟಿಂಗ್ ಕೆಲಸಗಳು ಮಾಡಿರುವುದು ನನ್ನದೇ ಅನಿತಾ ಕ್ರಿಯೇಷನ್ಸ್ ಕಚೇರಿಯಲ್ಲಿ. ರಿಷಿಕೇಶ್ ಬಳಿಯಿರುವುದು ಕೇವಲ ಎಡಿಟಿಂಗ್ ಫೈಲ್ಸ್ ಮಾತ್ರ. ಹಾರ್ಡ್ ಡಿಸ್ಕ್ ಅಲ್ಲ. ಅಲ್ಲದೇ ರಿಷಿಕೇಶ್ ಎಲ್ಲಿಯೂ ತಲೆಮರೆಸಿಕೊಂಡಿಲ್ಲ. ಅವರು ಮೈಸೂರಿನಲ್ಲಿ ಚಿತ್ರೀಕರಣದಲ್ಲಿದ್ದಾರೆ. ಸಿನಿಮಾ ಬಿಡುಗಡೆಯ ಬಳಿಕವಾದರೂ ನಮಗೆ ನೀಡಬೇಕಾದ ಸಂಭಾವನೆ ನೀಡುವುದಾಗಿ ಅಗ್ರಿಮೆಂಟ್ ಮಾಡಿಕೊಟ್ಟರೆ ಎಡಿಟಿಂಗ್ ಫೈಲ್ಗಳನ್ನು ಕೊಡಲು ನಾವು ಸಿದ್ಧರಿದ್ದೇವೆ" ಎಂದರು.
ಇದನ್ನೂ ಓದಿ: ಶಿವಮೊಗ್ಗ: ರೈಲ್ವೆಯಲ್ಲಿ ಉದ್ಯೋಗ ಭರವಸೆ; ಮಹಿಳೆಯ ವಿರುದ್ಧ ಹಣ ಪಡೆದು ವಂಚನೆ ಆರೋಪ